ಮಂಗಳೂರು: ಡಯಟ್ ಗೆ ನುಗ್ಗಿ ಮೂವರು ಮಹಿಳೆಯರಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ | ಆರೋಪಿ ಪೊಲೀಸ್ ವಶಕ್ಕೆ

Share the Article

ಮಂಗಳೂರು : ಕೊಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಕಚೇರಿಗೆ ನುಗ್ಗಿದ ಅಪರಿಚಿತನೊಬ್ಬ ಅಲ್ಲಿದ್ದ ಮೂವರು ಸಿಬ್ಬಂದಿಗೆ ಮಚ್ಚಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಪ್ರಕರಣದ ಆರೋಪಿ ಕುಂದಾಪುರದ ನವೀನ್ ಎಂಬಾತನನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಈತ ಕುಂದಾಪುರ ಕೋರ್ಟ್‌ನಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.

ಡಯಟ್ ‌ನಲ್ಲಿ ಸ್ಟೆನೋ ಗ್ರಾಫರ್ ಆಗಿರುವ ನಿರ್ಮಲಾ (43), ಪ್ರಥಮ ದರ್ಜೆ ಸಹಾಯಕಿ ರೀನಾ ರಾಯ್ (45), ಅಟೆಂಡರ್ ಗುಣವತಿ (58) ಗಾಯಗೊಂಡವರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿರ್ಮಲಾ ಅವರ ಪರಿಸ್ಥಿತಿ ಗಂಭೀರವಾಗಿದೆ.

ಜಿಲ್ಲಾ ಕಾರಾಗೃಹದ ಸಮೀಪದಲ್ಲೇ ಇರುವ ಡಯಟ್ ಕಚೇರಿಗೆ ಮಧ್ಯಾಹ್ನ 12.45ರ ಸುಮಾರಿಗೆ ಆಗಮಿಸಿದ ಆರೋಪಿ ನವೀನ್, ಕಾಲೇಜಿನ ಶಿಕ್ಷಕಿಯೊಬ್ಬರನ್ನು ಕೇಳಿದ್ದಾನೆ.

ಅಲ್ಲಿರುವ ಸಿಬ್ಬಂದಿ ಆ ಮಹಿಳೆ ಇಲ್ಲ ಎಂದು ಹೇಳಿದ್ದಕ್ಕೆ, ಅವರಿಗೊಂದು ಗಿಫ್ಟ್ ಕೊಡಲಿಕ್ಕಿದೆ ಎಂದು ಹೇಳಿ ಮಚ್ಚಿನಿಂದ ಮೂವರು ಮಹಿಳಾ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ಬೊಬ್ಬೆ ಹಾಕಿದಾಗ ಜೈಲು ಸಿಬ್ಬಂದಿ, ಸಾರ್ವಜನಿಕರು ಧಾವಿಸಿ ಬಂದಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗದೆ ಡಯಟ್ ಕಚೇರಿಯ ಚೇರ್‌ನಲ್ಲಿಯೇ ಕುಳಿತಿದ್ದ ಎನ್ನಲಾಗಿದೆ.

ಆರೋಪಿ ನವೀನ್ 2012ರಲ್ಲಿ ಡಯಟ್ ಕಾಲೇಜಿನಲ್ಲಿ ಡಿಎಡ್ ಮುಗಿಸಿ ಹೋಗಿದ್ದ. ಆ ಬಳಿಕವೂ ಡಯಟ್‌ನ ಚಟುವಟಿಕೆಗಳ ಬಗ್ಗೆ ಈತ ಮಾಹಿತಿ ಪಡೆದುಕೊಳ್ಳುತ್ತಿದ್ದ. ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದ ಈತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಮಾರ್, ಡಿಡಿಪಿಐ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave A Reply