ಶಾಂತಿ ಧರ್ಮ ಹೋರಾಟದ ಪ್ರತೀಕ ಕೋಟಿ-ಚೆನ್ನಯರು -ಡಾ.ಹೆಗ್ಗಡೆ
ಇಂದು ಜಿಲ್ಲೆಯ ಮನೆ ಮನೆಗಳಲ್ಲಿ ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ವಿಚಾರ ಕೇಳಿಬರುತ್ತಿದೆ. ನ್ಯಾಯ, ಧರ್ಮಕ್ಕಾಗಿ ಉಗ್ರ ಹಾಗೂ ಶಾಂತ ಹೋರಾಟ ನಡೆಸಿದ ಪ್ರತೀಕ ಕೋಟಿ-ಚೆನ್ನಯರು. ಧರ್ಮ ಸ್ಥಾಪನೆಗೆ ಇವು ಎರಡು ಮುಖಗಳು. ಸರ್ವರಿಗೆ ಸಮಾನತೆ ರಾಮ ರಾಜ್ಯದ ಪರಿಕಲ್ಪನೆ. ಇದಕ್ಕೆ ಸಂಘಟನಾತ್ಮಕ ಪ್ರಯತ್ನ ಅಗತ್ಯ. ಇದು ಗೆಜ್ಜೆಗಿರಿ ಕ್ಷೇತ್ರದಲ್ಲಿ ಆಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ದೇಯಿ ಬೈದ್ಯೆತಿ, ಕೋಟಿ -ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ರಾಮ ಲಕ್ಷ್ಮಣರಂತೆ ಕೋಟಿ-ಚೆನ್ನಯರು. ಲೋಕಕಲ್ಯಾಣಕ್ಕಾಗಿ ಶಕ್ತಿ ವಿನಿಯೋಗಿ ಸಿದವರು. ತಾಳ್ಮೆ, ಸಮನ್ವಯತೆ, ಶ್ರಮ ದಿಂದ ಕೀರ್ತಿ ಆಗುತ್ತದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ವಿಮಾನ ನಿಲ್ದಾಣಕ್ಕೆ ಹೆಸರು
ತುಳುನಾಡಿನ ದೈವಸ್ಥಾನಗಳಿಗೆ ಮೇರು ಸ್ಥಾನದಲ್ಲಿ ಮುಂದೆ ಗೆಜ್ಜೆಗಿರಿ ಕ್ಷೇತ್ರ ನಿಲ್ಲಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಇಡಬೇಕೆಂಬ ಮನವಿಗೆ ಪೂರ್ಣ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಗಿರಿನಂದನ ಸ್ಮರಣ ಸಂಚಿಕೆ ಕರಡು ಪ್ರತಿ ಅನಾವರಣ ಮಾಡಲಾಯಿತು. ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಸಮಿತಿಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್,ಬೆಳ್ತಂಗಡಿ ಯ ಹರೀಶ್ ಪೂಂಜ, ಮಂಗಳೂರಿನ ಉದ್ಯಮಿ ಊರ್ಮಿಳಾ ರಮೇಶ್ ಕುಮಾರ್, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ, ಗುಲ್ಬರ್ಗಾ ಆಕಾಶವಾಣಿ ನಿರ್ದೇಶಕ ಡಾ| ಸದಾನಂದ ಪೆರ್ಲ, ಚಲನಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಉಪಸ್ಥಿತರಿದ್ದರು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ರವೀಂದ್ರ ಸುವರ್ಣ, ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ರವಿ ಕಕ್ಕೆಪದವು, ಪ್ರಮುಖರಾದ ಗೋಪಾಲ ಅಂಚನ್, ನಾರಾಯಣ ಮಚ್ಚಿನ, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಕತಾರ್ ಬಿಲ್ಲವ ಸಂಘದ ಅಧ್ಯಕ್ಷ ರಘುನಾಥ ಅಂಚನ್, ಸೌದಿ ಅರೇಬಿಯಾ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಪ್ರಕಾಶ್ ಪೂಜಾರಿ, ಮಂಗಳೂರು ಮಹಿಳಾ ಗ್ರಾ. ಸ. ಬ್ಯಾಂಕ್ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ದುಬಾೖ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಮಂಗಳೂರಿನ ನ್ಯಾಯವಾದಿ ಅರುಣ್ ಬಂಗೇರ, ಮುಂಬಯಿ ಭಾರತ್ ಬ್ಯಾಂಕ್ ನಿರ್ದೇಶಕ ಪುರುಷೋತ್ತಮ ಕೋಟ್ಯಾನ್, ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.
ಗೌರವಾರ್ಪಣೆ
ಬಡಗನ್ನೂರು ಗ್ರಾ.ಪಂ. ಸದಸ್ಯೆ ಸುಶೀಲಾ, ಶಿಲಾ ಸ್ತಪತಿಗಳಾದ ಲಮಾಣಿ ಕುಬೇರಪ್ಪ ಹಾಗೂ ಕುಪ್ಪು ಸ್ವಾಮಿ ,ಕೋಟ ಹಾಗೂ ಮಠಂದೂರು ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಜಯಂತ ನಡುಬೈಲು ಮನವಿ ಓದಿದರು. ಸಂತೋಷ್ ಕುಮಾರ್ ಕೊಟ್ಟಿಂಜ ಸ್ವಾಗತಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಪ್ರಸ್ತಾವನೆಗೈದರು. ಅರುಣ್ ಉಳ್ಳಾಲ ನಿರ್ವಹಿಸಿದರು.