ಸುಳ್ಯ : ಹೊಳೆಯಲ್ಲಿ ಕಣ್ಮರೆಯಾಗಿದ್ದ ಮಹಿಳೆಯ ಶವ ನಾಲ್ಕು ದಿನಗಳ ಬಳಿಕ ಪತ್ತೆ

Share the Article

ಸುಳ್ಯ : ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಮಹಿಳೆ ಕಾಣೆಯಾಗಿದ್ದು, ಮಹಿಳೆಯ ಶವ ಪೆರಾಜೆ ಬಳಿ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.

ಪೆರಾಜೆ ಕಲ್ಚರ್ಪೆಯಿಂದ ವರದಿಯಾಗಿದೆ. ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ.

ಮೀನಾಕ್ಷಿ ಅವರನ್ನು ಅಂದು ರಾತ್ರಿಯಿಂದ ಅರಂತೋಡು ಗ್ರಾಮಸ್ಥರು ಹುಡುಕಿದರೂ ಪತ್ತೆಯಾಗಿರಲಿಲ್ಲ. ಮರುದಿನ ಸುಳ್ಯ ಅಗ್ನಿಶಾಮಕದಳದವರು ಮತ್ತು ಊರವರು ಹುಡುಕಲು ಪ್ರಾರಂಭಿಸಿದರು.

ನಾಲ್ಕು ದಿನಗಳಿಂದಲೂ ಪತ್ತೆ ಕಾರ್ಯ ಮಾಡುತ್ತಿದ್ದರೂ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ದಳದವರೊಂದಿಗೆ ಸೇರಿ ಪೈಚಾರ್ ಮುಳುಗು ತಜ್ಞರ ತಂಡ ಇಂದು ಬೆಳಿಗ್ಗೆಯಿಂದ ಹುಡುಕುತ್ತಿದ್ದು, ಮಧ್ಯಾಹ್ನದ ವೇಳೆಗೆ ಪೆರಾಜೆ ಬಳಿ ಮಹಿಳೆಯ ಶವ ಪತ್ತೆಯಾಯಿತು ಎಂದು ತಿಳಿದು ಬಂದಿದೆ.

Leave A Reply