ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಯ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದ ಕುಟುಂಬಸ್ಥರು

ರಸ್ತೆ ಅಪಘಾತದಲ್ಲಿ ತಮ್ಮ ಪುತ್ರಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗಗಳ ದಾನ ಮಾಡುವ ಮೂಲಕ ಕುಟುಂಬಸ್ಥರು ಸಾರ್ಥಕತೆ ಮೆರೆದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

 

ಹಳ್ಳೂರ ಗ್ರಾಮದ ಕವನ ಮಳ್ಳಯ್ಯ ಹಿರೇಮಠ (20) ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿ ಎನಿಸಿಕೊಂಡಿದ್ದಾಳೆ.

ಹಳ್ಳೂರ ಗ್ರಾಮದ ಕವನ ಹಿರೇಮಠ ಶಿಕಾರಿಪುರದ ಗಾರ್ಮೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆ.9ರಂದು ಹೊನ್ನಾಳಿ ತಾಲೂಕು ಸೊರಟೂರ ಗ್ರಾಮದ ಬಳಿ ಓಮಿನಿ- ಚಕ್ಕಡಿ ಗಾಡಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನ ಗಂಭೀರವಾಗಿ ಗಾಯಗೊಂಡಿದ್ದರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕವನ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳಂತೂ ಇನ್ನು ಬದುಕಲ್ಲ, ಅವಳ ಅಂಗಾಂಗವಾದರೂ ಇತರರಿಗೆ ಬದುಕು ನೀಡಲಿ ಎಂದು ನಿರ್ಧರಿಸಿದ ಆಕೆಯ ಕುಟುಂಬಸ್ಥರು ವೈದ್ಯರೊಂದಿಗೆ ಚರ್ಚಿಸಿದರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೃತಳ ಕುಟುಂಬಸ್ಥರು ಕಿಡ್ನಿ, ಹೃದಯ, ಲಿವರ್‌, ಕಣ್ಣು, ಚರ್ಮ ದಾನ ಮಾಡಿದರು. ತಕ್ಷಣವೇ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದರಿಂದ ನಾಲ್ವರ ಪ್ರಾಣ ಉಳಿದಂತಾಗಿದೆ. ಬಾಳಿ ಬೆಳಗಬೇಕಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ನೋವಿನ ನಡುವೆಯೂ ಸಾರ್ಥಕತೆ ಮೆರೆದಿದ್ದಾರೆ.

ಈ ಕಾರ್ಯ ಹಲವರಿಗೆ ಮಾದರಿಯಾಗಿದೆ. ಕುಟುಂಬಸ್ಥರ ಈ ನಿರ್ಧಾರಕ್ಕೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.