ಕ್ರಿಪ್ಟೋ ಕರೆನ್ಸಿಯಲ್ಲಿ ಪಾವತಿ ಸ್ವೀಕರಿಸಲು ಸಜ್ಜಾಗಿದೆ ಪುತ್ತೂರಿನ ಐಟಿ ಕಂಪನಿ | ಬಿಟ್‌ಕಾಯಿನ್‌ಝಡ್ ಕ್ರಿಪ್ಟೋ ಕರೆನ್ಸಿಯನ್ನು ಅಧಿಕೃತವಾಗಿ ತನ್ನ ಪಾವತಿ ಸ್ವೀಕರಿಸುವ ವಿಧಾನವನ್ನಾಗಿಸಿಕೊಂಡು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟ ವಿಭಾ ಟೆಕ್ನಾಲಜೀಸ್ !!

Share the Article

ಇತ್ತೀಚೆಗೆ ನೀವು ಕ್ರಿಪ್ಟೋಕರೆನ್ಸಿಗಳ ಬಗ್ಗೆ ಕೇಳಿರಬಹುದು. ಅದರ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರಲೂಬಹುದು. ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಇದೀಗ ಕ್ರಿಪ್ಟೋ ಮಾರುಕಟ್ಟೆಯ ಅವಕಾಶಗಳನ್ನು ಅರಿತು, ದಕ್ಷಿಣ ಕನ್ನಡದ ಪುಟ್ಟ ಪಟ್ಟಣ ಪುತ್ತೂರಿನ ಐಟಿ ಸಂಸ್ಥೆಯೊಂದು ಬಿಟ್‌ಕಾಯಿನ್‌ಝಡ್‌ (BitcoinZ) ಕ್ರಿಪ್ಟೋಕರೆನ್ಸಿಯನ್ನು ತನ್ನ ಅಧಿಕೃತ ಪಾವತಿ ಸ್ವೀಕರಿಸುವ ವಿಧಾನಗಳಲ್ಲಿ ಒಂದಾಗಿ ಅಳವಡಿಸಿಕೊಂಡಿದೆ.

ಕ್ರಿಪ್ಟೋಕರೆನ್ಸಿಯಲ್ಲಿನ ಅವಕಾಶ ಹಾಗೂ ತಂತ್ರಜ್ಞಾನದ ಭವಿಷ್ಯದ ಹೊಸ ದಾರಿಯನ್ನು ಅಳವಡಿಸಿಕೊಂಡಿರುವ ಪುತ್ತೂರಿನ ವಿಭಾ ಟೆಕ್ನೋಲಜೀಸ್‌, ಹೊಸ ಮಾದರಿಯ ಪಾವತಿ ಸ್ವೀಕರಿಸುವ ವ್ಯವಸ್ಥೆಯನ್ನು ಆರಂಭಿಸಿದೆ.

ವಿಭಾ ಟೆಕ್ನೋಲಜಿಸ್ ನಗರದಲ್ಲಿ ಕಳೆದ ಏಳು ವರ್ಷದಿಂದ ವೆಬ್‌ ಡಿಸೈನಿಂಗ್‌, ಅಪ್ಲಿಕೇಶನ್‌ ಡೆವೆಲಪ್‌ಮೆಂಟ್‌ ಹಾಗೂ ಇನ್ನಿತರ ಐಟಿ ಸೇವೆಗಳನ್ನು ನೀಡುವ ಸಣ್ಣ ತಂಡ. ಕ್ರಿಪ್ಟೋಮಾರುಕಟ್ಟೆ ತಂತ್ರಜ್ಞಾನ ಅರಿತು, ಇದೀಗ ಕ್ರಾಂತಿಕಾರಕ ಬದಲಾವಣೆಗೆ ಸಂಸ್ಥೆ ಅಣಿ ಇಟ್ಟಿದೆ.

ಕ್ರಿಪ್ಟೋಕರೆನ್ಸಿ ಎಂದರೇನು?

ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ.

ಏನಿದು ಬಿಟ್-ಕಾಯಿನ್ ಝಡ್ ?

ಇದು ಉತ್ಕೃಷ್ಟ ತಂತ್ರಜ್ಞಾನವುಳ್ಳ ಕ್ರಿಪ್ಟೋಕರೆನ್ಸಿ. ಬಿಟ್‌ಕಾಯಿನ್‌ ಮಾದರಿಯಲ್ಲೇ ಕ್ರಿಪ್ಟೋ ಮಾರುಕಟ್ಟೆಗೆ ಪ್ರವೇಶಿಸಿರುವ ಬಿಟಿಸಿಝಡ್‌ ಒಟ್ಟಾರೆ 21 ಬಿಲಿಯನ್‌ ಕಾಯಿನ್‌ಗಳನ್ನು ಮಾರುಕಟ್ಟೆಗೆ ಬಿಡಲಿದೆ. ಪ್ರಸ್ತುತ ಶೇ.50 ರಷ್ಟು ಕಾಯಿನ್‌ಗಳು ಕ್ರಿಪ್ಟೋ ಮಾರುಕಟ್ಟೆಯಲ್ಲಿ ವಿಶ್ವದಾದ್ಯಂತ ಚಲಾವಣೆಯಲ್ಲಿದೆ. ಅಷ್ಟೇ ಅಲ್ಲದೆ ತಂತ್ರಾಕಿವಾಗಿಯೂ ತನ್ನದೇ ಆದ ವಿಶೇಷತೆಗಳನ್ನೂ ಈ ಕ್ರಿಪ್ಟೋ ನಾಣ್ಯ ಒಳಗೊಂಡಿದೆ.

ಹಣ ಪಾವತಿಗೆ ಹೊಸ ವಿಧಾನ!

ಪ್ರಸ್ತುತ ಸಂಸ್ಥೆಗೆ ಕ್ರಿಪ್ಟೋಕರೆನ್ಸಿಯಲ್ಲೂ ಪಾವತಿ ಮಾಡಬಹುದು. BitcoinZ ಕ್ರಿಪ್ಟೋಕಾಯಿನ್‌ನ್ನು ತನ್ನ ಅಧಿಕೃತ ಪಾವತಿ ಸ್ವೀಕರಿಸುವ ವಿಧಾನವನ್ನಾಗಿ ಸಂಸ್ಥೆ ಅಳವಡಿಸಿಕೊಂಡಿದೆ. BitcoinZ ಮಾರುಕಟ್ಟೆ ಪ್ರವೇಶಿಸಿ ನಾಲ್ಕು ವರ್ಷಗಳಾದ ಹಿನ್ನೆಲೆಯಲ್ಲಿ, ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾವತಿ ವಿಧಾನವನ್ನು ಅಧಿಕೃತಗೊಳಿಸಲಾಗಿದೆ. ಕೆಲ ರಾಷ್ಟ್ರಗಳಲ್ಲಿ ಚಲಾವಣೆಯಲ್ಲಿರುವ ಹಾಗೂ ಪ್ರಸಿದ್ಧಿ ಪಡೆದ ಕ್ರಿಪ್ಟೋಕರೆನ್ಸಿಗಳನ್ನು ಹಣ ಸ್ವೀಕರಿಸುವ ವಿಧಾನವನ್ನಾಗಿ ಅಳವಡಿಸಿದೆ. ಪನಾಮ, ಸಿಂಗಾಪುರ, ಕ್ಯೂಬಾ ದೇಶಗಳಲ್ಲಿ ಇಥಿರಿಯಂ, ಬಿಟ್‌ಕಾಯಿನ್‌ಗಳ ಮೂಲಕ ಪಾವತಿ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ, ಕ್ರಿಪ್ಟೋಕರೆನ್ಸಿ ಬಳಸಿ ಆನ್‌ಲೈನ್‌ ಪೇಮೆಂಟ್‌ ಮಾಡುವ ವ್ಯವಸ್ಥೆಯೂ ಈಗಾಗಲೇ ಚಲಾವಣೆಯಲ್ಲಿವೆ. ಫಾರೆಕ್ಸ್‌ ಟ್ರೇಡಿಂಗ್‌ ವೇದಿಕೆಯಾದ ಮೆಟಾ ಟ್ರೇಡರ್‌ ಇತ್ಯಾದಿ ಅಂತಾರಾಷ್ಟ್ರೀಯ ಮಟ್ಟದ ಟ್ರೇಡಿಂಗ್‌ ಪ್ಲಾಟ್‌ಫಾರಂಗಳಲ್ಲಿ ಬಿಟ್‌ಕಾಯಿನ್‌, ಇಥಿರಿಯಂ ಸೇರಿ ಮೂರ್ನಾಲ್ಕು ಬಗೆಯ ಕ್ರಿಪ್ಟೋ ಕಾಯಿನ್‌ಗಳನ್ನು ಪಾವತಿಯ ವಿಧಾನವಾಗಿಯೂ ಬಳಸಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ

ಕ್ರಿಪ್ಟೋ ಬಗೆಗೆ ಮಾರುಕಟ್ಟೆಯಲ್ಲಿನ ಅನೇಕ ಮಿಥ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಸಂಸ್ಥೆಯ ಯುವಕರ ತಂಡ, ಇದೀಗ ಪ್ರಮೇಯ ಜ್ಞಾನ ಪ್ರಸರಣ ಕಾರ್ಯಕ್ರಮಗಳನ್ನೂ (ಪ್ರಮೇಯ ನಾಲೆಡ್ಜ್‌ ಶೇರಿಂಗ್‌ ಇನಿಷಿಯೇಟಿವ್‌) ಆರಂಭಿಸಿದೆ. ಹೊಸ ಪದ್ದತಿಯನ್ನು ಆರಂಭಿಸಿದ ವಿಭಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ BitcoinZ ಕಮ್ಯುನಿಟಿಯು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಗುರುತಿಸಿದೆ.

ಈ ಕುರಿತು ವಿಭಾ ಟೆಕ್ನಾಲಜೀಸ್‌ನ ಮಾರ್ಗದರ್ಶಕ ಹಾಗೂ ಐಟಿ ವಿಭಾಗದ ಮುಖ್ಯಸ್ಥ, ಕೇಶವ ಮೂರ್ತಿ ಚಂದ್ರಶೇಖರ್‌, ವಿಶ್ವದಾದ್ಯಂತ ಇಂದು ಕ್ರಿಪ್ಟೋ ತನ್ನದೇ ಆದ ಮಾರುಕಟ್ಟೆ ಹಾಗೂ ಕಮ್ಯುನಿಟಿಯನ್ನು ಸ್ಥಾಪಿಸುತ್ತಿದೆ. ಈಗಾಗಲೇ ಕೆಲ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ವಿಧಾನವನ್ನು ತಮ್ಮ ಅಧಿಕೃತ ಹಣಕಾಸು ಚಲಾವಣಾ ನಾಣ್ಯವಾಗಿ ಪರಿಗಣಿಸುವತ್ತ ಹೆಜ್ಜೆ ಇಡುತ್ತಿದೆ. ಅಂತೆಯೇ ಭಾರತದಲ್ಲೂ ಅನೇಕ ಖಾಸಗಿ ಸಂಸ್ಥೆಗಳು ವಿವಿಧ ಬಗೆಯ ಕ್ರಿಪ್ಟೋ ನಾಣ್ಯವನ್ನು ಪೇಮೆಂಟ್‌ ವಿಧಾನವಾಗಿ ಅಳವಡಿಸಿಕೊಳ್ಳುತ್ತಿವೆ. ಇನ್ನು ಮುಂದೆ ವಿಭಾ ಟೆಕ್ನಾಲಜೀಸ್‌ ಸಹ BitcoinZ ತನ್ನ ಪೇಮೆಂಟ್‌ ವಿಧಾನವನ್ನಾಗಿ ಅಳವಡಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.