ಪ್ರಾಣಿ ಮತ್ತು ಮನುಷ್ಯನ ನಡುವಿನ ಸಂಬಂಧ ಎಷ್ಟು ಪವಿತ್ರವೆಂಬುದನ್ನು ಸಾರಿ ಹೇಳುತಿದೆ ಈ ಕಥೆ | ವೃದ್ಧ ಮಹಿಳೆ ಆನೆಗೆ ಕೈ ತುತ್ತು ತಿನ್ನಿಸುವ ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲಿ ಪ್ರೀತಿ, ಆರೈಕೆ, ಅಕ್ಕರೆಯ ಜೊತೆಗೆ ನಂಬಿಕೆಯೂ ಬಹಳ ಮುಖ್ಯ. ಈ ವ್ಯಕ್ತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಇವರಿಂದ ನನಗೆ ತೊಂದರೆಯಾಗದು ಎಂಬ ನಂಬಿಕೆ ಪ್ರಾಣಿಗಳಿಗೂ, ಮಾತುಬಾರದ ಈ ಮೂಕಪ್ರಾಣಿ ನನ್ನನ್ನು ಅರ್ಥ ಮಾಡಿಕೊಳ್ಳುತ್ತದೆ, ನನಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಎಂಬ ನಂಬಿಕೆ ಮನುಷ್ಯನಿಗೂ ಇದ್ದಾಗ ಮಾತ್ರ ಪರಸ್ಪರ ಸಂಬಂಧ ಚೆನ್ನಾಗಿರಲು ಸಾಧ್ಯ.

 

ಇಂದು ಇಲ್ಲಿ ತೋರಿಸಲು ಹೊರಟಿರುವ ವೈರಲ್​ ವಿಡಿಯೋದಲ್ಲಿ ಕೂಡಾ ಪ್ರೀತಿ, ಅಕ್ಕರೆಯ ಜೊತೆಗೆ ನಂಬಿಕೆ ಇದ್ದರೆ ಪ್ರಾಣಿ ಮತ್ತು ಮನುಷ್ಯ ಎಷ್ಟು ಚೆನ್ನಾಗಿ ಒಟ್ಟಿಗೆ ಇರಬಹುದು ಎನ್ನುವ ಸಂದೇಶ ವ್ಯಕ್ತವಾಗಿದೆ.

ಎಷ್ಟು ದೈತ್ಯ ಪ್ರಾಣಿಯಾದರೂ, ಕೋಪಗೊಂಡರೆ ಇಡೀ ಊರನ್ನೇ ಅಲ್ಲೋಲಕಲ್ಲೋಲಗೊಳಿಸುವ ಸಾಮರ್ಥ್ಯ ಇರುವ ಪ್ರಾಣಿಯಾದರೂ ಅದನ್ನು ಪ್ರೀತಿಯಿಂದ ಜಯಿಸಬಹುದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸಾಮಾನ್ಯವಾಗಿ ಆನೆಗಳ ಬಗ್ಗೆ ಹೇಳುವಾಗ ಅವು ಎಷ್ಟೇ ದೊಡ್ಡ ಗಾತ್ರದಲ್ಲಿದ್ದರೂ ಚಿಕ್ಕ ಅಂಕುಶಕ್ಕೆ ಹೆದರಿ ಹುಲುಮಾನವ ಹೇಳಿದಂತೆ ಕೇಳುತ್ತವೆ ಎಂದು ಅಚ್ಚರಿ ವ್ಯಕ್ತಪಡಿಸುತ್ತೇವೆ. ಆದರೆ, ಈ ವಿಡಿಯೋವನ್ನು ನೋಡಿದರೆ ಅಂಕುಶ ಇಲ್ಲದೆಯೋ ಆನೆಯೊಟ್ಟಿಗೆ ಬೆರೆಯಬಹುದಲ್ಲಾ ಎಂಬ ಯೋಚನೆ ಬಾರದೇ ಇರದು.

ವಿಡಿಯೋ ತುಣುಕು

ಕೇರಳದಲ್ಲಿ ಚಿತ್ರೀಕರಿಸಲಾಗಿದ್ದು ಎನ್ನಲಾಗಿರುವ ಈ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು ದೈತ್ಯ ಆನೆಗೆ ತನ್ನ ಕೈಯಾರೆ ಊಟ ಮಾಡಿಸುತ್ತಿರುವ ದೃಶ್ಯ ಸೆರೆಯಾಗಿದೆ. ಮನೆಯ ಮಾಡಿಗೆ ತಾಗಿಕೊಂಡಂತೆ ಸೊಂಡಿಲೆತ್ತಿ ನಿಂತ ಗಜರಾಜನಿಗೆ ವೃದ್ಧ ಮಹಿಳೆ ತನ್ನ ಕೈಯಲ್ಲಿ ದೊಡ್ಡ ದೊಡ್ಡ ಗಾತ್ರದ ಉಂಡೆಗಳನ್ನು ಮಾಡಿ ಅದರ ಬಾಯಿಗಿಡುವ ದೃಶ್ಯ ಕಾಣಸಿಗುತ್ತದೆ. ಟ್ವಿಟರ್​ನಲ್ಲಿ ಹಂಚಿಕೊಂಡ ವಿಡಿಯೋಕ್ಕೆ ಸಾವಿರಾರು ಜನ ಮೆಚ್ಚುಗೆ ಸೂಚಿಸಿದ್ದು ಅದನ್ನು ರೀಟ್ವೀಟ್​ ಮಾಡುವ ಮೂಲಕ ವೈರಲ್ ಮಾಡಿದ್ದಾರೆ.

ಎಷ್ಟೇ ಪಳಗಿದ ಆನೆಗಳಾದರೂ ಕೆಲವೊಮ್ಮೆ ತಿರುಗಿಬೀಳುವ ಸಾಧ್ಯತೆಗಳಿರುವುದರಿಂದ ಮಾವುತರೂ ಕೂಡಾ ಅವುಗಳೊಟ್ಟಿಗೆ ತಮ್ಮದೇ ಶೈಲಿಯಲ್ಲಿ ವ್ಯವಹರಿಸುತ್ತಾರೆ. ಆದರೆ, ಈ ವಿಡಿಯೋದಲ್ಲಿರುವ ವೃದ್ಧ ಮಹಿಳೆ ಮಾತ್ರ ಆನೆಯನ್ನು ತನ್ನ ಮೊಮ್ಮಗುವಿನಂತೆ ಕಾಣುತ್ತಾ ಕೈಯಾರೆ ತುತ್ತು ತಿನ್ನಿಸುತ್ತಿರುವುದನ್ನು ನೋಡಿದರೆ ಸಂಬಂಧಗಳಿಗೆ ನಂಬಿಕೆಯೇ ಜೀವಾಳ ಎಂಬ ಮಾತು ನೆನಪಾಗದೇ ಇರದು.

Leave A Reply

Your email address will not be published.