10 ವರ್ಷದಲ್ಲಿ 25 ಬಾರಿ ಆಕೆ ಅನ್ಯ ಪುರುಷರೊಂದಿಗೆ ಓಡಿಹೋಗಿದ್ದಳು | ಹಾಗಿದ್ದರೂ ಗಂಡನಿಗೆ ಮಾತ್ರ ಅವಳೇ ಬೇಕಂತೆ !
ದಿಸ್ಪೂರ್: ಒಂದಲ್ಲ ಎರಡಲ್ಲ ಕಳೆದ 10 ವರ್ಷಗಳಲ್ಲಿ ಆಕೆ 25 ಬಾರಿ ಮನೆ ಬಿಟ್ಟು ಪರಪುರುಷರ ಜತೆ ಓಡಿಹೋಗಿದ್ದಾಳೆ. ಈ ಘಟನೆ ನಡೆದದ್ದು ಅಸ್ಸಾಂನ ದಿಸ್ಪೂರ್ ನಲ್ಲಿ. ಅಲ್ಲಿನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವುಪುರುಷರೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.
ಈಗ 40 ವರ್ಷದ ಮಹಿಳೆಯೊಬ್ಬಳು ಅಸ್ಸಾಂನ ನಾಗಾಂವ್ ಜಿಲ್ಲೆಯ ಧಿಂಗ್ ಲಹ್ಕರ್ ಗ್ರಾಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಜುದ್ದೀನ್‍ರನ್ನು ವಿವಾಹವಾಗಿದ್ದಳು. ಮದುವೆಯ ಬಳಿಕ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಮನೆಬಿಟ್ಟು ಓಡಿಹೋಗಿದ್ದಾಳೆ. ಹೀಗಿದ್ದರೂ, ಆಕೆಯ ಪಾಲಿಗೆ ಬದುಕು ತುಂಬಾನೇ ಉದಾರಿ. ಆಕೆಯ ಉದಾರಿ ಪತಿ ಮತ್ತು ಅತ್ತೆ ಮಾತ್ರ ಯಾವುದೇ ದೂರು ನೀಡದೆ, ಆಕೆಯನ್ನು ಪ್ರತಿಬಾರಿ ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ.
ಈ ಮಹಿಳೆಗೆ 3 ವರ್ಷ ಹಾಗೂ 3 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, 6 ವರ್ಷದ ಓರ್ವ ಮಗಳಿದ್ದಾಳೆ. ಹಾಗಿದ್ದರೂ ಆಕೆ ಪರಪುರುಷ ದಿಂದ ಮೋಹಿತಗೊಂಡು ಆ ಯುವಕರ ತೋಳು ಬಳಸಿ ಮನೆ ಬಿಡುತ್ತಿದ್ದಳು.
ಈ ವಿಚಾರವಾಗಿ ಮಾತನಾಡಿದ ಆಕೆಯ ಪತಿ ಮಾಫಿಜುದ್ದೀನ್, ನನ್ನ ಹೆಂಡತಿ ವಾಪಸ್ ಬಂದ ಬಳಿಕ ಮತ್ತೆ ಓಡಿಹೋಗುವುದಿಲ್ಲ ಎಂದು ಮಾತು ನೀಡಿದ್ದಳು. ಆದರೆ ಆ ಮಾತನ್ನು ಆಕೆ ಉಳಿಸಿಕೊಂಡಿಲ್ಲ. ಕೆಲವು ಬಾರಿ ನನ್ನ ಹೆಂಡತಿ ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳುತ್ತಿದ್ದಳು. ಮತ್ತೆ ಕೆಲವು ಬಾರಿ ತನ್ನ ಸಂಬಂಧಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ಹೋಗಿದ್ದೆ ಎನ್ನುತ್ತಿದ್ದಳು. ಕಾರಣಗಳು ಹಲವಾರು. ಆದರೆ ಕೆಲಸ ಮಾತ್ರ ಒಂದೇ ‘ ಅನ್ಯ ಪುರುಷರ ಮೋಹದ ಸಂಘ !
ಇತ್ತೀಚೆಗೆ ಒಂದು ಶನಿವಾರ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ, ನೆರೆ ಮನೆಯವರ ಬಳಿ ನನ್ನ ಮೂರು ತಿಂಗಳ ಮಗುವನ್ನು ಬಿಟ್ಟು ಆಕೆ ಓಡಿ ಹೋಗಿದ್ದಾಳೆ ಎಂದು ನನ್ನ ತಂದೆ ತಿಳಿಸಿದರು. ಅಲ್ಲದೇ ನೆರೆಮನೆಯವರು, ಆಡುಗಳಿಗೆ ಮೇವು ತರಲು ಹೋಗಿಬರುವುದಾಗಿ ಹೇಳಿ ಹೊರಟಿದ್ದಳು ಎಂದು ತಿಳಿಸಿದ್ದಾರೆ. ಮನೆಯಲ್ಲಿ ಆಡುಗಳು ಮತ್ತು ಚಿಕ್ಕ ಮಕ್ಕಳು ಮೇವಿಗಾಗಿ ಕಾದದ್ದೇ ಬಂತು. ಸುಖ ಮೇಯಲು ಹೋದ ಮಹಿಳೆ ನಾಪತ್ತೆ. ಇದು ಆ ಗಂಡನಿಗೆ ಹೊಸದೇನಲ್ಲ. ಈ ರೀತಿ 25 ಬಾರಿ ಆಗಿದೆ ಹಿಂದೆ.
ಇದೀಗ ಮತ್ತೆ ಅವಳು ಯಾವಾಗ ಹಿಂದಿರುಗುತ್ತಾಳೆ ಅಂತ ಗೊತ್ತಿಲ್ಲ. ಅಲ್ಲದೇ ಮನೆಯಲ್ಲಿದ್ದ 22,000 ಹಣ ಮತ್ತು ಕೆಲವು ವಸ್ತುಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ. ಆದರೆ ಯಾರೊಟ್ಟಿಗೆ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಕೂಡ ಇಲ್ಲ. ‘ಇದು ಅವಳು ಓಡಿ ಹೋಗುತ್ತಿರುವುದು 25ನೇ ಬಾರಿ ಆದ್ದರಿಂದ ನಮಗೂ ಇದು ಅಭ್ಯಾಸ ಆಗಿದೆ. ಆದರೂ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಅವಳನ್ನು ಮತ್ತೆ ಒಪ್ಪಿಕೊಳ್ಳುತ್ತೇನೆ. ನಮಗೆ ಇನ್ನೂ ಚಿಕ್ಕ, ಚಿಕ್ಕ ಮಕ್ಕಳಿದ್ದಾರೆ. ನಾನು ಅವಳನ್ನು ಒಪ್ಪಿಕೊಳ್ಳದಿದ್ದರೆ, ಅವರನ್ನು ನೋಡಿಕೊಳ್ಳುವವರ‍್ಯಾರು? ಕಾನೂನು ಮತ್ತು ಇತರೆ ಸಮಸ್ಯೆಗಳು ಆಗಬಾರದೆಂದು ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಹೇಳಿದ್ದಾರೆ ಆಕೆಯ ಉದಾರ ಮನಸ್ಸಿನ ಕರುಣಾಮಯಿ ಪತಿ ಮತ್ತು ಅತ್ತೆ.