ಇದುವರೆಗೂ ತಲೆಬಾಗದೆ ಕೆಚ್ಚೆದೆಯಿಂದ ಹೋರಾಡಿದ ಪಂಜಶೀರ್ ಯೋಧರು ಕೊನೆಗೂ ತಾಲಿಬಾನಿಗಳಿಗೆ ಶರಣು !!? | ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಸರ್ಕಾರ ರಚನೆಯ ಕಸರತ್ತಲ್ಲಿ ತಾಲಿಬಾನಿಗಳು!

Share the Article

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಎಷ್ಟು ದಿನ ಕೆಚ್ಚೆದೆಯಿಂದ ಹೋರಾಡಿದ ಪಂಜಶೀರ್ ಯೋಧರು ಕೊನೆಗೂ ತಾಲಿಬಾನಿಗಳಿಗೆ ಶರಣಾಗಿದ್ದಾರೆ. ಇದೂವರೆಗೆ ಯಾರಿಗೂ ತಲೆಬಾಗದೇ ಸ್ವತಂತ್ರವಾಗಿದ್ದ ಅಫ್ಘಾನಿಸ್ತಾನದ ಪಂಜಶಿರ್ ಪ್ರಾಂತ್ಯವನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎನ್ನಲಾಗಿದೆ.

ಪಂಜಶಿರ್​ನ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ ತಾವು ಸೋತಿಲ್ಲ, ಇನ್ನೂ ಪ್ರಮುಖ ಆಯಕಟ್ಟು ಜಾಗಗಳು ನಮ್ಮ ನಿಯಂತ್ರಣದಲ್ಲೇ ಇವೆ ಎಂದು ಹೇಳಿದೆಯಾದರೂ ಪಂಜಶಿರ್​ನ ಬಹುತೇಕ ಪ್ರದೇಶಗಳು ತಾಲಿಬಾನ್ ಸುಪರ್ದಿಯಲ್ಲಿವೆ ಎಂದು ವಿವಿಧ ಮಾಧ್ಯಮಗಳ ವರದಿಗಳು ಖಚಿಪಡಿಸಿವೆ. ಪಂಜಶಿರ್ ಸಂಪೂರ್ಣವಾಗಿ ತನ್ನ ವಶಕ್ಕೆ ಬಂದಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಇದರೊಂದಿಗೆ ಯುದ್ಧದ ರಗಳೆ ಅಂತ್ಯಗೊಂಡಿದೆ ಎಂದು ತಾಲಿಬಾನ್ ಘೋಷಿಸಿದೆ.

ಪಂಜಶಿರ್​ನಲ್ಲಿರುವ ಅಮ್ರುಲ್ಲಾ ಸಾಲೆಹ್ ಮತ್ತು ಅಹ್ಮದ್ ಮಸೂದ್ ಅವರ ಮನೆಗಳ ಮೇಲೆ ತಾಲಿಬಾನಿಗಳು ದಾಳಿ ಮಾಡಿ ವಶಕ್ಕೆ ತೆಗೆದುಕೊಂಡಿದ್ಧಾರೆ. ಆದರೆ, ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಸಾಲೆಹ್ ಅವರು ತಪ್ಪಿಸಿಕೊಂಡು ಗುಪ್ತ ಸ್ಥಳಕ್ಕೆ ಹೋಗಿದ್ದಾರೆನ್ನಲಾಗಿದೆ. ಎನ್​ಆರ್​ಎಫ್ ಪಡೆಯ ವಕ್ತಾರ ಫಾಹಿಂ ದಷ್ತಿ ಸೇರಿದಂತೆ ಅನೇಕ ಕಮಾಂಡರ್​ಗಳನ್ನ ತಾಲಿಬಾನ್ ಹತ್ಯೆಗೈದಿದೆ. ಇದೆಲ್ಲದರ ಮಧ್ಯೆ ಪಂಜಶಿರ್​ನ ಎನ್​ಆರ್​ಎಫ್ ಪಡೆ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡಿದೆಯಾದರೂ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಪಾಕ್, ಚೀನಾಗೆ ತಾಲಿಬಾನ್ ಆಹ್ವಾನ:

ಇದೇ ವೇಳೆ, ಸರ್ಕಾರ ರಚನೆಯ ಎಲ್ಲಾ ಸಿದ್ಧತೆ ಮುಗಿದಿದೆ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ. ಹೊಸ ಸರ್ಕಾರ ರಚನೆಯ ಸಮಾರಂಭಕ್ಕೆ ಪಾಕಿಸ್ತಾನ, ಕತಾರ್, ಟರ್ಕಿ, ರಷ್ಯಾ, ಚೀನಾ ಮತ್ತು ಇರಾನ್ ದೇಶಗಳಿಗೆ ತಾಲಿಬಾನ್ ಅಹ್ವಾನ ಕೊಟ್ಟಿದೆಯಂತೆ.

ಇನ್ನು, ಇಪ್ಪತ್ತು ವರ್ಷಗಳ ಹಿಂದೆ ಇದ್ದ ತನ್ನ ಆಡಳಿತಕ್ಕಿಂತ ಈ ಬಾರಿ ತುಸು ಉದಾರವಾಗಿ ಆಡಳಿತ ನಡೆಸುವುದಾಗಿ ತಾಲಿಬಾನ್ ಹೇಳಿದೆ. ಎಲ್ಲಾ ಪಂಗಡಗಳನ್ನು ಆಡಳಿತದಲ್ಲಿ ಸೇರಿಸಿಕೊಳ್ಳುವುದಾಗಿ ಅದು ಹೇಳಿದೆ. ಹಿಂದಿನ ಅಫ್ಘಾನ್ ಸರ್ಕಾರಕ್ಕೆ ಹಾಗೂ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮಹಿಳೆಯರಿಗೆ ಷರಿಯಾ ಕಾನೂನಿನ ಪ್ರಕಾರ ಎಲ್ಲಾ ಸ್ವಾತಂತ್ರ್ಯ ನೀಡಲಾಗುವುದು. ಶಾಲೆ ಕಾಲೇಜುಗಳಿಗೆ ಮಹಿಳೆಯರು ಹೋಗಬಹುದು. ಆದರೆ, ಹಿಜಾಬ್ ಧರಿಸುವುದು ಕಡ್ಡಾಯ. ಪುರುಷರೊಂದಿಗೆ ಸಹ ಶಿಕ್ಷಣ ಮಹಿಳೆಯರಿಗೆ ನಿಷಿದ್ಧ. ಇಂಥ ಕೆಲ ನಿರ್ಬಂಧಗಳನ್ನು ತಾಲಿಬಾನ್ ವಿಧಿಸಿದೆ.

ಭಾರತದ ಜೊತೆ ಹೇಗೆ ಸಂಬಂಧ?

ಇನ್ನು, ಭಾರತದ ಜೊತೆ ಉತ್ತಮ ಬಾಂಧವ್ಯ ಮುಂದುವರಿಸಬಯಸುವುದಾಗಿಯೂ ತಾಲಿಬಾನ್ ಹೇಳಿದೆ. ತಾಲಿಬಾನ್ ವಿರೋಧಿ ಅಫ್ಘನ್ನರಿಗೆ ಭಾರತ ಆಶ್ರಯ ಕೊಟ್ಟರೆ ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದೂ ಭಾರತಕ್ಕೆ ಎಚ್ಚರಿಕೆ ಕೊಟ್ಟಿದೆ. ಕಾಶ್ಮೀರ ವಿಚಾರ ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟಿದ್ದು, ತಾನು ತಲೆಹಾಕುವುದಿಲ್ಲ ಎಂದು ತಾಲಿಬಾನ್ ನಾಯಕರು ಕೆಲ ಸಂದರ್ಶನಗಳಲ್ಲಿ ತಿಳಿಸಿದ್ಧಾರೆ.

ಇಪ್ಪತ್ತು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಸೇನೆ ಕಳೆದ ತಿಂಗಳು ಸಂಪೂರ್ಣವಾಗಿ ಕಾಲ್ಕಿತ್ತಲು ಆರಂಭಿಸುತ್ತಿದ್ದಂತೆಯೇ ತಾಲಿಬಾನ್ ಕ್ಷಿಪ್ರಗತಿಯಲ್ಲಿ ಇಡೀ ದೇಶವನ್ನು ವಶಕ್ಕೆ ತೆಗೆದುಕೊಂಡು ಅಚ್ಚರಿ ಮೂಡಿಸಿದೆ. ಅಮೆರಿಕದ ಶಸ್ತ್ರಾಸ್ತ್ರಗಳಿಂದ ಬಲಿಷ್ಠವಾಗಿದ್ದ ಅಫ್ಘನ್ ಸೇನಾ ಪಡೆ ಕಿಂಚಿತ್ತೂ ಪ್ರತಿರೋಧ ಇಲ್ಲದೇ ತಾಲಿಬಾನ್​ಗೆ ಶರಣವಾಗಿದ್ದು ಇನ್ನೂ ಅಚ್ಚರಿ ಎನಿಸಿದೆ. ಉಗ್ರರೆಂಬ ಹಣೆಪಟ್ಟಿಯನ್ನು ಇನ್ನೂ ಹೊತ್ತಿರುವ ತಾಲಿಬಾನ್ ನೇತೃತ್ವ ಸರ್ಕಾರದ ಅಸ್ತಿತ್ವವನ್ನು ಅಂತರರಾಷ್ಟ್ರೀಯ ಸಮುದಾಯ ಜೀರ್ಣಿಸಿಕೊಳ್ಳುತ್ತಿದೆ.

ಅಮೆರಿಕ ಸೇನೆ ಕಾಲ್ತೆಗೆದ ಬಳಿಕ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಮತ್ತು ನಾಗರಿಕ ಬಿಕ್ಕಟ್ಟು ತಲೆದೋರಿದೆ. ಚೀನಾದಿಂದ ತಾಲಿಬಾನ್​ನ ಆಡಳಿತಕ್ಕೆ ಬೆಂಬಲ ಸಿಗುವುದು ಬಹುತೇಕ ಖಚಿತವಾಗಿದೆ. ತಾಲಿಬಾನ್​ನ ಪ್ರಧಾನ ಬೆಂಬಲಿಗನಾಗಿರುವ ಪಾಕಿಸ್ತಾನದ ಪಾತ್ರ ಬಹಳ ಮಹತ್ವವಿರಲಿದೆ. ಅಫ್ಘಾನಿಸ್ತಾನದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ ಹೂಡಿಕೆ ಮಾಡಿದ್ದ ಭಾರತಕ್ಕೆ ಅಂತಿಮವಾಗಿ ಸಿಕ್ಕಿದ್ದೇನು ಎಂಬ ಪ್ರಶ್ನೆಯಂತೂ ಹಾಗೆಯೇ ಉಳಿದುಕೊಂಡಿದೆ.

Leave A Reply