ಕಡಬ ಮುಳಿಮಜಲಿನಲ್ಲಿ ಮಹಿಳೆಗೆ ಹಲ್ಲೆ, ಆರೋಪ-ಪ್ರತ್ಯಾರೋಪ | ಇತ್ತಂಡದ ಐವರು ಕಡಬ ಆಸ್ಪತ್ರೆಗೆ ದಾಖಲು
ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಮಹಿಳೆಯ ಮೇಲೆ ಸಮೀಪದ ಅಂಗಡಿಯ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದ್ದು, ಈ ಸಂಬಂಧ ಇತ್ತಂಡದ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಸೆ.5ರಂದು ನಡೆದಿದೆ.
ಮುಳಿಮಜಲಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ಎಂಬವರ ಪತ್ನಿ ಪ್ರಮೋದ ಎಂಬವರ ಮೇಲೆ ಸಮೀಪದಲ್ಲಿ ಮಾಂಸ ಹಾಗೂ ಇತರ ಅಂಗಡಿ ವ್ಯಾಪಾರ ನಡೆಸುತ್ತಿರುವ ರಾಜು ಮ್ಯಾಥ್ಯೂ ಎಂಬವರು ನಮ್ಮ ವೀಡಿಯೋ ಮಾಡಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ರಕ್ಷಣೆಗೆ ಬಂದ ತನ್ನ ಮಗಳ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರಮೋದ ಹಾಗೂ ಅವರ ಪುತ್ರಿ ಪ್ರಜಾರಶ್ಮಿ ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ರಾಜು ಮ್ಯಾಥ್ಯೂ, ಅವರ ಪತ್ನಿ ಶಾಲಿ ಮ್ಯಾಥ್ಯೂ, ಅವರ ಪುತ್ರ ರಕ್ಷಿತ್ ಮಾಣಿ ಅವರುಗಳು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಪ್ರಮೋದ ಅವರು, ಸೆ.5ರಂದು ಬೆಳಿಗ್ಗೆ ನಾನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವೇಳೆ ಏಕಾ ಏಕಿ ಬಂದ ರಾಜು ಮ್ಯಾಥ್ಯೂ ಅವರ ಮಗ ರಕ್ಷಿತ್ ಮಾಣಿ ನಮ್ಮ ವೀಡಿಯೋ ಮಾಡಿದ. ಇದೇ ವೇಳೆ ಬಂದ ರಾಜು ಮ್ಯಾಥ್ಯೂ ನನಗೆ ಹಲ್ಲೆ ಮಾಡಿದ, ಇದೇ ವೇಳೆ ನಾನು ನನ್ನ ಮಗಳನ್ನು ಕರೆದೆ ಅವಳು ಬಂದ ಕೂಡಲೇ ಅವಳ ಮೇಲೆ ಕೈಹಾಕಿ ಕಿರುಕುಳ ನೀಡಿದ್ದಾನೆ. ನಾನು ಅಲ್ಲಿ ವ್ಯಾಪಾರ ಮಾಡದಂತೆ ಮಾಡುವುದೇ ರಾಜುನ ಉದ್ದೇಶವಾಗಿದೆ, ಈತ ನನಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದಾನೆ, ನಮ್ಮ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಮೋದ ಅವರು ಆಗ್ರಹಿಸಿದ್ದಾರೆ.
ಇತ್ತ ರಾಜು ಮ್ಯಾಥ್ಯೂ ಅವರು ಹೇಳಿಕೆ ನೀಡಿ, ಯಾವುದೇ ಪರವಾನಿಗೆ ಇಲ್ಲದೆ ವೀಕೆಂಡ್ ಕರ್ಫ್ಯೂ ವೇಳೆಯೂ ವ್ಯಾಪಾರ ನಡೆಸುತ್ತಿದ್ದಾರೆ. ನನ್ನ ಅಂಗಡಿಯಲ್ಲಿ ದನದ ಮಾಂಸ ಇದೆ, ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಅವರಿಗೆ ಸಾಲ ನೀಡಿದ್ದು, ಅದನ್ನು ಹಿಂತಿರುಗಿಸಲಿಲ್ಲ. ಈ ಬಗ್ಗೆ ನಾನು ಕೋರ್ಟ್ ಕೇಸು ಹಾಕಿದ್ದೇನೆ, ಇದಕ್ಕಾಗಿಯೇ ಅವರು ನನ್ನ ಮೇಲೆ, ಹಾಗೂ ನನ್ನ ಪತ್ನಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿರುವ ಹಿಂದೂ ಮುಖಂಡರು ರಾಜು ಮ್ಯಾಥ್ಯೂ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ವಿ.ಹಿಂ.ಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ಅವರು, ಮಹಿಳೆ ಹಾಗೂ ಅವರ ಪುತ್ರಿಯ ಮೇಲೆ ಹಲ್ಲೆ ಹಾಗೂ ಕಿರುಕುಳ ನೀಡಿರುವ ರಾಜು ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜು ಅವರು ಈ ಹಿಂದೆಯೂ ಅಕ್ರಮ ಜಾನುವಾರು ಸಾಗಾಟ, ದನದ ಮಾಂಸ ಮಾರಾಟ ವಿಚಾರದಲ್ಲಿ ತುಂಬಾ ಕಿರಿಕ್ ಮಾಡಿದ್ದಾರೆ. ಈತನಿಂದ ಪರಿಸರದಲ್ಲಿ ಶಾಂತಿ ಭಂಗವಾಗುತ್ತಿದ್ದು ಈತನ ವಿರುದ್ದ ಪೋಲಿಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ ಶ್ರೀರಾಮ ಸೇನೆಯ ಮುಖಂಡ ಗೋಪಾಲ್ ನಾಯ್ಕ್ ಮೇಲಿನ ಮನೆ ಅವರು ಆಸ್ಪತ್ರೆಗೆ ಭೇಟಿ ನೀಡಿ ರಾಜು ಅವರ ವಿರುದ್ದ ಕ್ರಮ ಕೈಗೊಂಡು ಮಹಿಳೆಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.