ಹಿಂದೆಂದೂ ಕಂಡರಿಯದ ಭೀಕರ ಪ್ರವಾಹಕ್ಕೆ ಒಳಗಾದ ವಿಶ್ವದ ದೊಡ್ಡಣ್ಣ | ‘ಐಡಾ’ ಚಂಡಮಾರುತಕ್ಕೆ ಅಮೆರಿಕ ಗಡಗಡ
ಎಂದೂ ಕಾಣದ ತುರ್ತುಪರಿಸ್ಥಿತಿಗೆ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕ ಒಳಗಾಗಿದೆ. ಅಮೆರಿಕದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅನೇಕ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ‘ಐಡಾ’ ಚಂಡಮಾರುತ ಇಲ್ಲಿಗೂ ಅಪ್ಪಳಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಸಾವು-ನೋವಿನ ಪ್ರಮಾಣ ಏರುತ್ತಲೇ ಇದೆ.
ಮೊದಲು ಕ್ಯೂಬಾ ದೇಶವನ್ನು ಆವರಿಸಿದ್ದ ಐಡಾ ಚಂಡಮಾರುತ, ನಂತರ ಅಮೆರಿಕಾದ ಲೂಸಿಯಾನ ರಾಜ್ಯಕ್ಕೂ ಅಪ್ಪಳಿಸಿದೆ. ಲೂಸಿಯಾನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನತೆ ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಸಾವಿರಾರು ಮನೆಗಳ ಮೇಲ್ಛಾವಣಿ ಈಗಾಗಲೇ ಹಾರಿಹೋಗಿವೆ. ವಿದ್ಯುತ್ ಕಂಬಗಳು, ಮರಗಳು ಬುಡಮೇಲಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಐಡಾ ಪರಿಣಾಮ ಹಲವೆಡೆ ಸುಂಟರಗಾಳಿ ಕಾಣಿಸಿಕೊಂಡು, ಪ್ರವಾಹ ಹೆಚ್ಚಾಗಿ ರಸ್ತೆಗಳು ನದಿಗಳಂತೆ ಗೋಚರಿಸುತ್ತಿವೆ. ಸಾವಿರಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಮಿಸಿಸಿಪ್ಪಿ, ಅಲಭಾಮಾ, ಪೆನ್ಸಿಲ್ವೇನಿಯಾ, ನ್ಯೂ ಜೆರ್ಸಿ, ನ್ಯೂಯಾರ್ಕ್, ನ್ಯೂ ಇಂಗ್ಲೆಂಡ್, ಕನ್ನೆಕ್ಟಿಕಟ ಹೀಗೆ
ಪೂರ್ವ ಕರಾವಳಿಯ ಅನೇಕ ಕಡೆ ಭೀಕರ ಮಳೆಯಾಗುತ್ತಿದ್ದು, ನೆರೆ ಆವರಿಸಿದೆ. ಭಾರಿ ಮಳೆಯಿಂದಾಗಿ ನ್ಯೂಯಾರ್ಕ್ ಸಿಟಿ ಮತ್ತು ನ್ಯೂ ಜೆರ್ಸಿಯ ಸಾರ್ವಜನಿಕ ರೈಲ್ವೆ ಸಂಚಾರ ಸ್ಥಗಿತಗೊಂಡಿದೆ.
ಈ ಎಲ್ಲಾ ಅವಘಡಗಳಿಂದಾಗಿ ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದ ಜನತೆಗೆ ಅಮೆರಿಕ ದ್ರೋಹ ಬಗೆದಿದೆ ಎಂಬ ಮಾತು ಕೇಳುತ್ತಿರುವ ಹಿನ್ನೆಲೆಯಲ್ಲಿ, ಇದು ಅಫ್ಘನ್ ದೇಶದ ಪ್ರಜೆಗಳ ಶಾಪ ಆಗಿರಬಹುದೆಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.