ಮತ್ತೆ ಬಂದ್ ಆಗಲಿದೆ ಶಿರಾಡಿಘಾಟ್ !! | ವಾಹನಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ ಹಾಸನ ಜಿಲ್ಲಾಧಿಕಾರಿ
ಶಿರಾಡಿಘಾಟ್‌ನಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಇದೀಗ ಆದೇಶ ಹೊರಡಿಸಿದ್ದಾರೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶಪುರ ಸಮೀಪದ ದೋಣಿಗಲ್ ಬಳಿ ತಿಂಗಳ ಹಿಂದೆ ರಸ್ತೆಯ ಒಂದು ಭಾಗದಲ್ಲಿ ಭೂ ಕುಸಿತವುಂಟಾಗಿದ್ದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ರಸ್ತೆ ದುರಸ್ತಿಯಾಗಿದ್ದರಿಂದ 20 ಟನ್ ಸರಕು ಸಾಗಾಣೆಯ ಲಾರಿಗಳು, ಟ್ಯಾಂಕರ್‌ಗಳು ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಆಗಸ್ಟ್ 16 ರಿಂದ ಅನುಮತಿ ನೀಡಲಾಗಿತ್ತು.
ಆದರೆ ಈಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕೋರಿಕೆಯಂತೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸು, ಜೀಪು, ಮ್ಯಾಕ್ಸಿಕ್ಯಾಬ್, ಕಾರುಗಳು ಸೇರಿದಂತೆ ಪ್ರಯಾಣಿಕರ ವಾಹನಗಳು, ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.