ದ.ಕ ಜಿಲ್ಲೆಯಲ್ಲಿ ಇಂದು ರಾತ್ರಿ 9 ಗಂಟೆಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿ , ಜಿಲ್ಲಾಧಿಕಾರಿ ಹೇಳಿಕೆ
ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಈ ಬಾರಿಯೂ ಆ. 28 ಹಾಗೂ 29 ರಂದು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಇಂದು ರಾತ್ರಿ 9 ಗಂಟೆಯಿಂದ ಆರಂಭಗೊಳ್ಳುವ ವೀಕೆಂಡ್ ಕರ್ಫ್ಯೂ ಆ.30 ರ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ.
ಆ.28ರ ಶನಿವಾರ ಮತ್ತು ಆ.29ರ ರವಿವಾರ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅಂಗಡಿ, ಮಳಿಗೆಗಳನ್ನು ತೆರೆಯಬಹುದು ಹಾಗೂ ಬೀದಿ ಬದಿ ವ್ಯಾಪಾರ ಮಾಡಬಹುದು.
ಹಾಗಾಗಿ ಸಾರ್ವಜನಿಕರು ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಆ ಬಳಿಕ ಅನಗತ್ಯವಾಗಿ ತಿರುಗಾಡಬಾರದು. ವಾರಾಂತ್ಯ ಕರ್ಫ್ಯೂ ವೇಳೆ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ತುರ್ತು ಸೇವೆಗೆ ಅನುಮತಿ ಇದೆ.
ರೆಸ್ಟೋರೆಂಟ್, ಹೊಟೇಲ್‌ಗಳಲ್ಲಿ ಕೇವಲ ಪಾರ್ಸಲ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ವಿಮಾನ, ರೈಲು, ಬಸ್ ಸಂಚಾರಗಳಿಗೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.