ಮೂರು ತಿಂಗಳ ಬಳಿಕ ಮಗಳ ಕೈಸೇರಿದ ತಾಯಿಯ ಫೋನ್ | ಇಷ್ಟಕ್ಕೂ ಈ ಕಥೆಯ ಹಿನ್ನೆಲೆಯೇನು?
ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೂರು ತಿಂಗಳುಗಳ ಹಿಂದೆ ಕಾಣೆಯಾಗಿದ್ದ ತಾಯಿಯ ಮೊಬೈಲ್ ಫೋನ್ ಕೊನೆಗೂ ಆಸ್ಪತ್ರೆಯ ಗೋಡೌನ್ ನಲ್ಲಿ ಪತ್ತೆಯಾಗಿದೆ.
ಮೇ 16 ರಂದು ಕೋವಿಡ್ ಗೆ ತುತ್ತಾಗಿ ಕುಶಾಲನಗರ ತಾಲೂಕಿನ ಗುಮ್ಮನಕೊಲ್ಲಿ ನಿವಾಸಿ ಮಹಿಳೆ ಪ್ರಭಾ ಎಂಬುವವರು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಆಸ್ಪತ್ರೆಯಲ್ಲೇ ಕಾಣೆಯಾಗಿತ್ತು.
ಅಮ್ಮನ ಪ್ರೀತಿಗೆ ಎಂದೂ ಕೊನೆಯಿಲ್ಲ. ಪ್ರತಿಯೊಂದು ಮಗುವೂ ತಾಯಿಯ ಆರೈಕೆ ಇಲ್ಲದೆ ಬದುಕುವುದು ಕಷ್ಟವೇ ಸರಿ. ಅಂತದರಲ್ಲಿ ಮೃತ ಪ್ರೇಮ ಅವರ ಮಗಳು ತನ್ನ ತಾಯಿಯ ನೆನಪುಗಳು ತುಂಬಿರೋ ಮೊಬೈಲ್ ಫೋನ್ ಕಳೆದು ಹೋಗಿದೆ ಎಂದು ಬೇಸರ ಪಡುವುದಲ್ಲಿ ತಪ್ಪೇ ಇಲ್ಲ ಬಿಡಿ.
ಅಮ್ಮನ ಮೊಬೈಲ್ ಫೋನ್ ಬೇಕೆಂದು ಪುತ್ರಿ ಹೃತಿಕ್ಷಾ ಅಳಲು ತೋಡಿಕೊಂಡಿದ್ದರು. ತನ್ನ ತಾಯಿಯ ನೆನಪಿಗಾಗಿ 3 ತಿಂಗಳಿನಿಂದ ಮೊಬೈಲ್ ಹುಡುಕುತ್ತಲೇ ಇದ್ದು,ಸಾಮಾಜಿಕ ಜಾಲತಾಣಗಳಲ್ಲಿ ಪುತ್ರಿಯ ಮನವಿ ವೈರಲ್ ಆಗಿತ್ತು.
ಆಕೆಯ ಅಳಲಿಗೆ ಇದೀಗ ಮೂರು ತಿಂಗಳ ಬಳಿಕ ತಾಯಿಯ ನೆನಪು ಮತ್ತೆ ಮರುಕಳಿಸಿದಂತಾಗಿದೆ. ಮೃತ ಪ್ರೇಮ ಅವರ ಮೊಬೈಲ್ ಫೋನ್ ಅನ್ನು ಗೋಡೌನ್ ನಲ್ಲಿ ಪತ್ತೆ ಮಾಡಿದ ಆಸ್ಪತ್ರೆ ಸಿಬ್ಬಂದಿಯೊಬ್ಬರು ನೀಡಿದ್ದಾರೆ.
ಮಡಿಕೇರಿ ನಗರ ಪೊಲೀಸ್ ಠಾಣೆಗೆ ಮೊಬೈಲ್ ಫೋನ್ ಅನ್ನು ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಯ ಗೋಡೌನ್‌ನಲ್ಲಿ ಪತ್ತೆಯಾಗಿದ್ದು, ಮೊಬೈಲ್ ಹೊರಗಿನ ಕವರ್ ಬದಲಾಗಿದೆ. ಉಳಿದೆಲ್ಲಾ ಡೇಟಾ ಅದರಲ್ಲಿದೆ. ಮೊಬೈಲ್ ಮರಳಿ ಸಿಗುತ್ತಿರುವುದಕ್ಕೆ ಹೃತೀಕ್ಷಾ ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಪತ್ತೆ ಮಾಡುವಲ್ಲಿ ಮಡಿಕೇರಿ ನಗರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.