

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ನ ಹಿಂಸಾಚಾರಗಳ ವಿಚಾರವನ್ನು ಮುಂದಿಟ್ಟುಕೊಂಡು, ಭಾರತದಲ್ಲಿ ಹಿಂದೂ ಟೆರರ್ ಇದೆ ಎಂದವರಿಗೆ ನಟಿ ಪ್ರಣಿತಾ ತಿರುಗೇಟು ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈಗಾಗಲೇ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದಾರೆ. ಅಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇಡೀ ವಿಶ್ವ ಮರುಕ ವ್ಯಕ್ತಪಡಿಸುತ್ತಿದೆ. ಈ ವಿಚಾರ ಭಾರತದಲ್ಲೂ ಚರ್ಚೆ ಆಗುತ್ತಿದೆ. ಇದರ ಜೊತೆಗೆ ಹಿಂದೂ ಉಗ್ರರು ಎನ್ನುವ ವಿಚಾರ ಕೂಡ ಚರ್ಚೆಗೆ ಬಂದಿದೆ. ಆರ್ ಎಸ್‍ಎಸ್ ಸಂಘಟನೆಗೆ ಸೇರಿದವರು ಬೇರೆ ಧರ್ಮದವರ ಮೇಲೆ ಹಿಂಸಾಚಾರ ನಡೆಸುತ್ತಿದ್ದಾರೆ.
ಹೀಗಾಗಿ ಭಾರತದಲ್ಲಿ ಹಿಂದೂ ಟೆರರ್ ಇದೆ. ತಾಲಿಬಾನಿಗಳಿಗೂ ಹಿಂದೂ ಟೆರರಿಸಮ್‍ಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅನೇಕ ಟ್ವೀಟ್‍ಗಳನ್ನು ಕೂಡ ಮಾಡಲಾಗಿದೆ. ಈ ವಿಚಾರವಾಗಿ ಪ್ರಣಿತಾ ಇದೀಗ ಪ್ರತಿಕ್ರಿಯಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವುದನ್ನು ಮರೆ ಮಾಚಿ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಕೆಲವರು ಹಿಂದೂ ಟೆರರ್ ಪದ ಬಳಸುತ್ತಿದ್ದಾರೆ. ಪರಿಕಲ್ಪನೆಯನ್ನು ನ್ಯಾಯ ಸಮ್ಮತಗೊಳಿಸುವ ಪ್ರಯತ್ನಗಳು ಅವರ ಕಲ್ಪನೆಯಾಗಿಯೇ ಉಳಿಯುತ್ತದೆ. ಭಾರತೀಯರೇ ಎಚ್ಚರ, ಶತ್ರುಗಳು ನಮ್ಮ ಗಡಿಯಾಚೆ ಇರುವುದಿಲ್ಲ, ಅವರು ನಿಮ್ಮ ಸುತ್ತಲೂ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಪ್ರೌಡ್ ಹಿಂದೂ. ನಿಮ್ಮ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಆಗುತ್ತಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ.
ಇದಲ್ಲದೆ , ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹಿಂದುತ್ವವನ್ನು ತಾಲಿಬಾನಿ ಉಗ್ರತ್ವಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ಬೆನ್ನಲ್ಲೇ ಪ್ರಣಿತಾ ಟ್ವಿಟ್ ಮಾಡಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ, ನಟಿ ಸ್ವರಾ ಭಾಸ್ಕರ್ ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಆಗ್ರಹಗಳು ಕೇಳಿಬರುತ್ತಿವೆ.













