ಅವಳಿ-ಜವಳಿ ಕಥೆಕಟ್ಟಿ ಇಬ್ಬರನ್ನು ಒಲಿಸಿಕೊಂಡ ಖತರ್ನಾಕ್ ಕಿಲಾಡಿ | ಆತನ ನಾಟಕಕ್ಕೆ ತೆರೆ ಎಳೆದ ಪೊಲೀಸರು

ನೀವೆಲ್ಲಾ ಅವಳಿ-ಜವಳಿ ಕಥೆಗಳನ್ನು ಡಬಲ್ ಆಕ್ಟಿಂಗ್ ಮೂಲಕ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬ ತನ್ನ ನಿಜ ಜೀವನದಲ್ಲಿ ಇದೇ ರೀತಿ ಕಥೆ ಕಟ್ಟಿ, ಮೋಸ ಮಾಡಿ ಜೈಲುಪಾಲಾದ ಘಟನೆ ಚೆನ್ನೈನಲ್ಲಿ ನಡೆದಿದೆ.

 

ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎಂಬಾತ ನಾವು ಅವಳಿ-ಜವಳಿ ಮಕ್ಕಳು, ನನ್ನಂತೆ ಇನ್ನೊಬ್ಬನಿದ್ದಾನೆ ಎಂದು ಹೇಳಿ ಮೋಸ ಮಾಡಿದ ವ್ಯಕ್ತಿ.

ಆತನ ಹೆಸರು ಎಷ್ಟು ಉದ್ದವಾಗಿದೆಯೋ ಹಾಗೆಯೇ ಆತನ ಕಥೆಯು ಕೂಡ. ಈತ ಈಗಾಗಲೇ ಒಂದು ಮದುವೆಯಾಗಿ, ಇದೀಗ ಎರಡನೇ ಮದುವೆಯಾಗಲು ಅವಳಿ-ಜವಳಿ ನೆಪ ಒಡ್ಡಿ ಯೋಜನೆ ರೂಪಿಸಿ ಸಿಕ್ಕಿಬಿದ್ದಿದ್ದಾನೆ.

30 ವರ್ಷದ ರಾಯನ್‌ಗೆ ಈಗಾಗಲೇ ಮದುವೆಯಾಗಿದ್ದು, ಮಗು ಕೂಡ ಇದೆ. ಆದರೆ ಈತನಿಗೆ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯ ಜೊತೆಗೆ ಪ್ರೇಮಾಂಕುರವಾಗಿತ್ತು. ಅವಳನ್ನು ಮದುವೆಯಾಗುವ ಭರವಸೆ ಕೊಟ್ಟು ಹತ್ತಿರವಾಗಿದ್ದ.

ಆದರೆ ಈತನಿಗೆ ಮದುವೆಯಾಗಿರುವ ವಿಷಯ ಆಕೆಗೆ ಗೊತ್ತಿರಲಿಲ್ಲ. ಮನೆಯವರು ಕೂಡ ಮದುವೆಗೆ ಒಪ್ಪಿ ನಿಶ್ಚಿತಾರ್ಥ ಮಾಡಿ ಮುಗಿಸಿದರು. ಇದೇ ವೇಳೆ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಕೂಡ ಈತ ಪಡೆದುಕೊಂಡ.

ಈ ನಡುವೆ ಯುವತಿಗೆ ಯಾರೋ ಆತನ ಬಗ್ಗೆ ವಿಷಯ ತಿಳಿಸಿ, ಇವನಿಗೆ ಈಗಾಗಲೇ ಮದುವೆಯಾಗಿದೆ ಎಂದಿದ್ದಾರೆ. ಈ ಬಗ್ಗೆ ಆತನ ಬಳಿ ವಿಚಾರಿಸಿದಾಗ ಆತ ತನಗೆ ಅವಳಿ ಸಹೋದರನೊಬ್ಬನಿದ್ದಾನೆ. ನನಗೆ ಆತ ಅಣ್ಣ ಆಗಬೇಕು. ಎಲ್ಲರೂ ನಿನ್ನ ಹಾಗೆಯೇ ಕನ್‌ಫ್ಯೂಸ್‌ ಮಾಡಿಕೊಳ್ಳುತ್ತಾರೆ. ಅವನಿಗೆ ಮದುವೆಯಾಗಿ, ಮಗುವಿದೆ ಎಂದು ಯುವತಿ ಮತ್ತು ಆಕೆಯ ಕುಟುಂಬದವರನ್ನು ನಂಬಿಸಿದ್ದಾನೆ. ಜೊತೆಗೆ ಅಣ್ಣ ದುಬೈನಲ್ಲಿದ್ದಾನೆ ಎಂದೂ ಕೂಡ ಹೇಳಿದ್ದಾನೆ.

ಅಷ್ಟೇ ಅಲ್ಲದೆ, ಈ ಖತರ್ನಾಕ್ ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದಾನೆ. ಇನ್ನು ತನ್ನ ಮೇಲೆ ಯಾವುದೇ ರೀತಿಯ ಅನುಮಾನ ಬಾರದಿರಲಿ ಎಂದು ಇರಬಹುದು.

ಆದರೆ,ಈ ಮುಂಚೆಯೇ ಈತ ಮೋಸ ಮಾಡುತ್ತಿರುವುದಾಗಿ ಯುವತಿಗೆ ತಿಳಿದಿದ್ದರಿಂದ, ಆಕೆ ಆತನನ್ನು ಅಷ್ಟು ಸುಲಭವಾಗಿ ನಂಬಲಿಲ್ಲ. ಇನ್ನೂ ಸಂದೇಹಗೊಂಡು ನಿಜ ವಿಷಯ ತಿಳಿಸದಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಬೆದರಿಸಿದ್ದಾಳೆ.

ಇದರಿಂದ ರೊಚ್ಚಿಗೆದ್ದ ಆತ ತನ್ನ ಅಸಲಿ ಮುಖ ತೋರಿಸಿ ತನ್ನ ಬಗ್ಗೆ ಎಲ್ಲಾ ಹೇಳಿಕೊಳ್ಳುತ್ತಾನೆ. ಹಾಗೆಯೇ ಕಂಪ್ಲೇಂಟ್‌ ಕೊಟ್ಟರೆ ಆ್ಯಸಿಡ್ ದಾಳಿ ನಡೆಸುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಆದರೆ ಈತನ ಬೆದರಿಕೆಗೆ ಜಗ್ಗದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಆರೋಪಿ ರಾಯನ್‌ ಪೊಲೀಸರ ಪಾಲಾಗಿದ್ದಾನೆ.

Leave A Reply

Your email address will not be published.