ಕಾರ್ಕಳ: ತಾಲೂಕು ಪಂಚಾಯತ್ ಸಭೆಗೆ ತಡವಾಗಿ ಬಂದ ಅಧಿಕಾರಿ|ಸಭೆಯ ಮಧ್ಯದಲ್ಲೇ ಸಖತ್ ಕ್ಲಾಸ್ ತೆಗೆದು ಹೊರಕಳುಹಿಸಿದ ನೂತನ ಸಚಿವ ಸುನಿಲ್ ಕುಮಾರ್
ತಾಲೂಕು ಪಂಚಾಯತ್ ಸಭೆಗೆ ತಡವಾಗಿ ಬಂದು ಬೇಜವಾಬ್ದಾರಿತನ ಪ್ರದರ್ಶಿಸಿದ ಅಧಿಕಾರಿಯನ್ನು ನೂತನ ಸಚಿವ ವಿ.ಸುನಿಲ್ ಕುಮಾರ್ ಅವರು ಸಭೆಯ ಮಧ್ಯದಲ್ಲಿ ಹೊರಕ್ಕೆ ಕಳುಹಿಸಿದ ಪ್ರಸಂಗ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾ.ಪಂ ಸಾಮರ್ಥ್ಯ ಸೌಧದಲ್ಲಿ, ಕಾರ್ಕಳ ಮತ್ತು ಹೆಬ್ರಿ ತಾಲೂಕು ಪಂಚಾಯತ್ ಸಭೆ ಸೋಮವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಆರಂಭದ ವೇಳೆ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿ ಸಚಿವರು ಮಾಹಿತಿ ಬಯಸಿ ಇಲಾಖೆಯಿಂದ ಮಾಹಿತಿ ನೀಡುವಂತೆ ಕೇಳಿದರು. ಆ ವೇಳೆ ಸಭೆಯಲ್ಲಿ ಆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯೇ ಇರಲಿಲ್ಲ. ಅಧಿಕಾರಿ ಗೈರು ಹಾಜರಾದ ಬಗ್ಗೆ ಗರಂ ಆದ ಸಚಿವರು ಉಳಿದ ಇಲಾಖೆಗಳ ಮಾಹಿತಿ ಕೇಳಲಾರಂಭಿಸಿದರು.
ಸಭೆ ನಡೆದ ತುಂಬಾ ಹೊತ್ತಿನ ಬಳಿಕ ಜಲಜೀವನ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿ ಸಭೆಗೆ ಆಗಮಿಸಿದರು. ಅವರು ಸಭಾಂಗಣದ ಒಳಗೆ ಬರುವುದನ್ನು ಕಂಡ ಸಚಿವರು ಸಭೆಯಿಂದ ಹೊರಹೋಗುವಂತೆ ಸೂಚಿಸಿದರು.
ಸಭೆ ಮುಗಿದು ಹೊರಬಂದ ವೇಳೆಗೆ ಹೊರಗೆ ನಿಂತಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಎಲ್ಲ ಇಲಾಖೆಯ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವಂತೆ ಹಾಗೂ ಕರ್ತವ್ಯ ಪಾಲಿಸುವಂತೆ ತಿಳಿಹೇಳಿದರು.