ಕೊಯಿಲ ಜಾನುವಾರು ಫಾರ್ಮ್‌ನಲ್ಲಿ ಜಾನುವಾರು ಏಲಂಗೆ ವಿ.ಹಿಂ.ಪ,ಬಜರಂಗದಳ ಆಕ್ಷೇಪ ,ಉಗ್ರ ಪ್ರತಿಭಟನೆಯ ಎಚ್ಚರಿಕೆ

ಕಡಬ :ಕಡಬ ತಾಲೂಕಿನ ಕೊಯಿಲದಲ್ಲಿ ಜಿಲ್ಲಾ ಜಾನುವಾರು ತಳಿ ಸಂವರ್ಧನ ಮತ್ತು ಪಾಲನಾ ಕೇಂದ್ರದಲ್ಲಿ ಜು. 29ರಂದು ಜಾನುವಾರು ಏಲಂ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು ನಕಲಿ ರೈತರ ಹೆಸರಿನಲ್ಲಿ ಜಾನುವಾರುಗಳನ್ನು ಪಡೆದುಕೊಂಡು ಅವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುವ ಸಾಧ್ಯತೆಗಳಿವೆ. ಆದ ಕಾರಣ ಕೂಡಲೇ ಜಾನುವಾರುಗಳ ಏಲಂ ಪ್ರಕ್ರಿಯೆಯನ್ನು ಮುಂದೂಡಬೇಕು. ಇಲ್ಲದಿದ್ದರೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಉಗ್ರ ಪ್ರತಿಭಟನೆಯನ್ನು ನಡೆಸಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೆ. ಕೃಷ್ಣ ಪ್ರಸನ್ನ ಎಚ್ಚರಿಸಿದ್ದಾರೆ.

 

ಮಲೆನಾಡು ಗಿಡ್ಡ ಸಹಿತ ಒಟ್ಟು 64 ಜಾನುವಾರುಗಳನ್ನು ಏಲಂ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು ಕೊಯಿಲ ಜಾನುವಾರು ಅಭಿವೃದ್ಧಿ ಕೇಂದ್ರದಲ್ಲಿ ಒಟ್ಟು 700 ಎಕರೆ ನಿವೇಶನ ಲಭ್ಯವಿದ್ದು ಜಾನುವಾರುಗಳನ್ನು ಸಾಕುವುದು ಇಲ್ಲಿ ಸಮಸ್ಯೆಯಾಗುವುದಿಲ್ಲ. ಭಾರತೀಯ ತಳಿಯ ಮಲೆನಾಡುಗಿಡ್ಡ ಹಸುಗಳನ್ನು ಮಾರಾಟ ಮಾಡುವ ಬದಲು ಅದನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಒತ್ತಾಯಿಸುತ್ತದೆ. ಒಂದು ವೇಳೆ ಜಾನುವಾರುಗಳನ್ನು ಏಲಂ ಮಾಡುವುದಾದರೆ ದಾಖಲೆ ಸಹಿತ ರೈತರ ಅರ್ಜಿಗಳನ್ನು ಪಡೆದುಕೊಂಡು ಅರ್ಜಿಗಳ ತನಿಖೆ ನಡೆದ ಬಳಿಕವಷ್ಟೇ ಮಾರಾಟ ಕಾರ್ಯವನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave A Reply

Your email address will not be published.