ಅತುಲ ವೈಭವದ ಹಿರೇಬಂಡಾಡಿಯ ಉಳ್ಳತ್ತೋಡಿಯ ಬ್ರಹ್ಮಕಲಶೋತ್ಸವದ ಮೂರನೆಯ ದಿನ
ಹಿರೇಬಂಡಾಡಿಯ ಉಳ್ಳತ್ತೋಡಿಯ ವೈಭವದ ಬ್ರಹ್ಮಕಲಶೋತ್ಸವದ ಮೂರನೆಯ ದಿನವಾದ ನಿನ್ನೆ, ಭಾನುವಾರ, ನವೀಕರಣ-ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಜೆ ಕಾರ್ತಿಕೇಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಡಿಯೂರು ಮಹಾಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರು, ಪುತ್ತೂರಿನ ಶಾಸಕರೂ, ಬ್ರಹ್ಮಕಲಶೋತ್ಸವದ ಅಧ್ಯಕ್ಷರೂ ಆದ ಸಂಜೀವ ಮಠ೦ದೂರು ಅವರು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ। ಕರುಣಾಕರ ನಿಡಿಂಜಿ, ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೇವಪ್ಪ ಪಡ್ಪು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನಾರ್ಧನ ಗೌಡ ಸಾಂತಿತ್ತಡ್ಡ ಉಪಸ್ಥಿತರಿದ್ದರು.
ಹಲವು ಕಿಲೋಮೀಟರುಗಳಷ್ಟು ದೂರದಿಂದಲೇ, ರಸ್ತೆಯ ಇಕ್ಕೆಲಗಳನ್ನು ಶುದ್ಧಗೊಳಿಸಿ, ಅಲಂಕಾರಮಾಡಿ, ಅಲ್ಲಲ್ಲಿ ಕಮಾನುಗಳನ್ನು, ಕಲಶಗಳನ್ನೂ ರಚಿಸಿ, ಮುಖ್ಯದ್ವಾರದಲ್ಲಿ ಕಾರಂಜಿಯನ್ನಿಟ್ಟು ಮಾಡಿದ ಅಲಂಕಾರ ಪ್ರತಿದಿನವೂ ಅತಿಥಿಗಳಾಗಿ ಬರುತ್ತಿರುವ ಗಣ್ಯರ ಶ್ಲಾಘನೆಗೆ ಒಳಗಾಗುತ್ತಿದೆ.
ಹಿರೇಬಂಡಾಡಿ ಗ್ರಾಮಸ್ಥರ ಹಲವು ತಿಂಗಳುಗಳ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ.
ಒಡಿಯೂರು ಮಹಾಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರ ನುಡಿ :
ಭಗವಂತನ ಜತೆಗೆ ಅನುಸಂಧಾನ ಸಾಧಿಸಲು ಹಲವು ದಾರಿಗಳಿದ್ದು ನಾವು ಮೊದಲಿಗೆ ಕಾಮ ಕ್ರೋಧ ಮಾಡ ಮೋಹ ಮತ್ಸರ ವನ್ನು ಬಿಡಬೇಕು. ಆಮೇಲೆ ದೇವರನ್ನು ಯಜ್ಞ ಯಾಗ ತಪ ಭಜನೆ ಮತ್ತು ದಾನಾದಿಗಳಿಂದ ಮನಸ್ಸು ಗೆಳಯಬೇಕು.
ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಜಾಗೃತವಾಗಬೇಕು. ಹಾಗಾಗಲು ಪೋಷಕರು ಅವರಿಗೆ ಒಳ್ಳೆಯ ಸಂಸ್ಕಾರ ಕೊಟ್ಟು ಕಲಿಸಬೇಕು. ಮೈಮೂಲತಃ ಇಲ್ಲಿನ ಷಣ್ಮುಖ ದೇವರು ಸಮರ ಸೇನಾನಿ. ನಾವು ದೇಶ ಕಟ್ಟುವ ರಾಷ್ಟ್ರ ಸೇನಾನಿಗಳಾಗಬೇಕು. ಸದಾ ಹಸಿರಿನ ಹಿರೇಬಂಡಾಡಿಯಾ ಸ್ವಚ್ಛತೆ, ಕಾರ್ಯಕ್ರಮದ ಅಚ್ಚುಕಟ್ಟುತನ, ಗ್ರಾಮಸ್ಥರು ಹಲವು ಕಿಲೋಮೀಟರುಗಳು ಮಾಡಿದ ಅಲಂಕಾರ ಮತ್ತು ಸ್ವಚ್ಛತೆಯನ್ನು ಸ್ವಾಮೀಜಿಯವರು ಹೊಗಳಿ, ಸ್ವಚ್ಛಭಾರತದ ನೆನಪುಮಾಡಿದರು.
ಭ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿ ಮಾಡಿದರೆ ಸಾಲದು. ಇವತ್ತು ಬೆಳಗಿದ ದೀಪವನ್ನು ಇನ್ನಷ್ಟು ಪ್ರಜ್ವಲಿಸುವಂತೆ ನೋಡಿಕೊಳ್ಳಬೇಕು. ಇನ್ನು ಮುಂದಕ್ಕೆ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗುತ್ತದೆ ಅಂದರು.
ಕರುಣಾಕರ ನಿಡಿಂಜಿ
ಭಾರತೀಯ ಇತಿಹಾಸ ಅತ್ಯಂತ ಪುರಾತನವಾದದ್ದು. ನಮ್ಮ ಸಾಹಿತ್ಯವು ಜಾನಪದ ಸಾಹಿತ್ಯ ಮತ್ತು ಪುರಾಣಗಳನ್ನೊಳಗೊಂಡು ಹುಲುಸಾಗಿ ಬೆಳೆದುಬಂದಿದೆ. ನಮ್ಮ ಪೂರ್ವಜರು ನಮ್ಮ ಧರ್ಮದ ಜತೆಗೆ ಬದುಕಿನ ಇತರ ಅಗತ್ಯ ಸೂಕ್ಷ್ಮಗಳನ್ನೂ ತುಂಬಿದ್ದರು. ಅದರಿಂದ ಸಹಜ ಮತ್ತು ನೆಮ್ಮದಿಯ ಬದುಕುವ ಅವಕಾಶ ಕಲ್ಪಿತವಾಗಿತ್ತು.
ಹಿಂದೆ ಪ್ರಕೃತಿಯನ್ನೂ ದೇವರ ರೂಪದಲ್ಲಿ ನೋಡುತ್ತಿದ್ದರು. ಭೂಮಿಯನ್ನು ತಾಯಿ ಎಂದು ಕರೆಯುತ್ತಿದ್ದರು. ಧಾರ್ಮ, ಆಚರಣೆ ಮತ್ತು ಪ್ರಕೃತಿಯ ಸಂಬಂಧ ಅವಿನಾಭಾವ ಆಗುವ ನಿಟ್ಟಿನಲ್ಲಿ ಎಲ್ಲವೂ ಇತ್ತು. ಆದರೆ ಈಗ ನಮ್ಮ ಶಿಕ್ಷಣ ವ್ಯವಸ್ಥೆ ಅದನ್ನು ಮರೆಮಾಚುತ್ತಿದೆ.ನಮ್ಮ ಪರಂಪರೆ, ಸಂಸ್ಕೃತಿಯನ್ನು ಎತ್ತಿ ನಿಲ್ಲಿಸುವ ಕೆಲಸ ನಡೆಯಬೇಕಿದೆ. ತಪ್ಪಿಕೊಂಡ ಭವ್ಯ ಪರಂಪರೆಯ ಕೊಂಡಿಯನ್ನು ಮತ್ತೊಮ್ಮೆ ಜೋಡಿಸುವ ಕೆಲಸ ಆಗಬೇಕಿದೆ. ಅದು ಇವತ್ತಿನ ಇಂತಹಾ ಕಾರ್ಯಕ್ರಮಗಳ ಭಾರತದ ಅಂದಿನ ವೈಭವತೆಯನ್ನು ಮರು ಜೀವಂತಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಪುತ್ತೂರು ಶಾಸಕ ಮತ್ತು ಹಿರೇಬಂಡಾಡಿಯವರೇ ಆದ ಸಂಜೀವ ಮಠ೦ದೂರು :
ಈ ಕೆಲಸ ಮಾಡುವಾಗ, ಹಲವು ಜನ್ ಹೇಳುತ್ತಿದ್ದರು : ನಿಮಗೆ ಏನು, ಶಾಸಕರಿದ್ದಾರೆ ಅಲ್ಲವಾ ಅಂತ. ಸ್ವಲ್ಪ ದಿನ ನನ್ನ ತಲೆಯಲ್ಲೂ ಅದೇ ಇತ್ತು. ಆದರೆ ಇವತ್ತು ನಾನು ಹೇಳುತ್ತೇನೆ : ಇಲ್ಲಿ ನೆರೆದಿರುವ ಸಾವಿರಾರು ಜನರು ತಮ್ಮ ಒಂದೊಂದು ಕೈಯನ್ನು ನೀಡದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ನಿನ್ನೆ ಸನ್ಮಾನಿತಗೊಂಡವರು :
ದೇವಾಲಯಕ್ಕೆ ಮರಗಳನ್ನು ನೀಡಿದ ಧರ್ಣಪ್ಪ ಗೌಡ ಕುಂಟ್ಯಾನ, ಶಶಿಧರ ರಾವ್ ಬೊಳ್ಳಿಕ್ಕಳ.
ಗೌರವಾರ್ಪಣೆ :
ಸ್ವಾಮೀಜಿಯವರಿಗೆ ಫಲ ಪುಷ್ಪ ನೀಡಿ ಗೌರವಿಸಿದ್ದು ಪೆರಾಬೆ ಪ್ರಸಾದ್ ಶೆಟ್ಟಿ ದಂಪತಿ
ಕನ್ನಡ ಪ್ರಾಧ್ಯಾಪಕ ಕರುಣಾಕರ ನಿಡಿಂಜೆ ಅವರಿಗೆ ಪದ್ಮನಾಭ ಪಟಾರ್ತಿ
ಸಂಜೀವ ಮಠ೦ದೂರು ಅವರಿಗೆ ಸುಂದರ ಎಲಿಯ
ಸುಧಾಕರ ಪೇಜಾವರ ಅವರಿಗೆ ಉಮೇಶ್ ಸಿದ್ಯೋಟ್ಟು
ಮೀನಾಕ್ಷಿ ಕಜೆಕೋಡಿ ಪ್ರಾರ್ಥಿಸಿದರು. ಧಾರ್ಮಿಕ ಸಭಾ ಸಮಿತಿ ಸದಸ್ಯ ಸೋಮೇಶ್ ಕೆ. ವಂದಿಸಿದರು. ಭ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ಸುಧಾಕರ ಪೇಜಾವರ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತ್ಯ ಸಂಚಾಲಕ ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಲ್ಪಾಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಮಠ೦ದೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗುಂಡ್ಯ, ಪ್ರಧಾನ ಕಾರ್ಯದರ್ಶಿ ನವೀನ ಪಡ್ಪು, ಕೋಶಾಧಿಕಾರಿ ವಿಶ್ವನಾಥ್ ಕೆಮ್ಮಟೆ ಮತ್ತಿತರ ವಿವಿಧ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಉಸ್ತುವಾರಿ ನೋಡಿಕೊಂಡಿದ್ದರು.