

ತೆಲಂಗಾಣದಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯಗೊಂಡ ಯುವಕನ ಜೊತೆ ಪ್ರೀತಿ ಬೆಳೆಸಿದ್ದ ಯುವತಿಯೊಬ್ಬಳು ತಮ್ಮಿಬ್ಬರ ವಿವಾಹಕ್ಕೆ ಪೋಷಕರು ಒಪ್ಪದೇ ಇದ್ದ ಕಾರಣ, ತನ್ನ ಹೆತ್ತವರನ್ನೇ ಮಾದಕ ದ್ರವ್ಯದ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಘಟನೆ ವಿಕಾರಾಬಾದ್ ಜಿಲ್ಲೆ ಯಾಚಾರಂನಲ್ಲಿ ನಡೆದಿದೆ.
ಸುರೇಖಾ ಎನ್ನುವ ಆರೋಪಿತ ಯುವತಿ, ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಕೆಲವ ವರ್ಷಗಳ ಹಿಂದೆ ಈಕೆ ಇನ್ಸ್ಟಾಗ್ರಾಂ ನಲ್ಲಿ ಪರಿಚಯಗೊಂಡ ಯುವಕನೊಂದಿಗೆ ಸ್ನೇಹ ಮಾಡಿ ನಂತರ ಅದು ಪ್ರೇಮಕ್ಕೆ ತಿರುಗಿತ್ತು.
ಯುವಕ ಬೇರೆ ಜಾತಿಯವನಾದ ಕಾರಣ ಆರೋಪಿ ಸುರೇಖಾಳ ಮದುವೆಗೆ ಹೆತ್ತವರು ಒಪ್ಪಿರಲಿಲ್ಲ. ಈ ಕಾರಣದಲ್ಲಿ ಮನೆಯಲ್ಲಿ ಅನೇಕ ಬಾರಿ ಗಲಾಟೆ ಕೂಡಾ ಆಗಿತ್ತು ಎನ್ನಲಾಗಿದೆ.
ಪೋಷಕರಾದ ದಶರಥ ಮತ್ತು ಲಕ್ಷ್ಮೀ ತಮ್ಮಿಬ್ಬರ ಮದುವೆಗೆ ಒಪ್ಪದ ಕಾರಣ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆಸ್ಪತ್ರೆಯಿಂದ ಬರುವಾಗ ಔಷಧೀಯ ಇಂಜೆಕ್ಷನ್ಗಳನ್ನು ಕದ್ದು ತಂದಿದ್ದಾಳೆ. ಆ ಮೂಲಕ ಜ.24 ರ ರಾತ್ರಿ ತಂದೆ ತಾಯಿಗೆ ಹೆಚ್ಚಿನ ಪ್ರಮಾಣದ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾಳೆ.
ನಂತರ ಇದನ್ನು ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನ ಪಟ್ಟಿದ್ದಾರೆ. ಘಟನೆಯ ನಂತರ ತನ್ನ ಸಹೋದರನಿಗೂ ಸುಳ್ಳು ವಿಷಯ ಹೇಳಿದ್ದಾಳೆ. ಆದರೆ ಆರೋಪಿತ ಮಾತಿನಿಂದ ಅನುಮಾನಗೊಂಡ ಪೊಲೀಸರು ತನಿಖೆ ಮಾಡಿದಾಗ, ಮನೆಯಲ್ಲಿ ಖಾಲಿ ಇಂಜೆಕ್ಷನ್ ಬಾಟಲಿ, ಸಿರಿಂಜ್ಗಳು ಪತ್ತೆಯಾಗಿದೆ. ಇದು ಕೊಲೆ ಎನ್ನುವುದು ಆಗ ಅರಿವಿಗೆ ಬಂದಿದೆ. ಕೂಡಲೇ ಸುರೇಖಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇದು ಪ್ರೇಮ ವಿವಾಹಕ್ಕಾಗಿ ಮಾಡಿದ ಕೃತ್ಯ ಎಂದು ಹೇಳಿ ಒಪ್ಪಿಕೊಂಡಿದ್ದಾಳೆ.
ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಕಳುಹಿಸಿದ್ದಾರೆ.













