

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಕೆಜಿಗಟ್ಟಲೆ ಚಿನ್ನ ವಜ್ರ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ನೇಪಾಳ ದಂಪತಿ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಯಮಲೂರಿನ ಉದ್ಯಮಿ ಶಿಮಂತ್ ಎಸ್. ಜೈನ್ ನೀಡಿದ ದೂರಿನ ಅನ್ವಯ ದಿನೇಶ್ (32), ಆತನ ಪತ್ನಿ ಕಮಲಾ (25) ಹಾಗೂ ಇತರರ ವಿರುದ್ಧ ಮನೆಯಲ್ಲಿ ಕೆಲಸ ಮಾಡುವ ನೌಕರ ಕಳ್ಳತನದಲ್ಲಿ ಭಾಗಿ (ಬಿಎನ್ಎಸ್ ಕಲಂ 306) ಅನ್ವಯ ಪ್ರಕರಣ ದಾಖಲಾಗಿದೆ. “ದಿನೇಶ್ ದಂಪತಿಯು ಜ.25ರಂದು ನಮ್ಮ ಮನೆಯಲ್ಲಿ 11.5 ಕೆ.ಜಿ. ಚಿನ್ನಹಾಗೂ ವಜ್ರಾಭರಣ, ಐದು ಕೆ.ಜಿ ಬೆಳ್ಳಿ ವಸ್ತುಗಳು, 11.5 ಲಕ್ಷ ರೂ. ನಗದು ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ದೋಚಿರುವ ಆಭರಣಗಳ ಮೌಲ್ಯ 18 ಕೋಟಿ ರೂ.ಗಳಾಗಿದೆ” ಎಂದು ಶಿಮಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಭರಣಗಳನ್ನು ದೋಚಿ ನೇಪಾಳ ದಂಪತಿ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಹಲವು ರಚಿಸಲಾಗಿದೆ. ಹೊರರಾಜ್ಯಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹತ್ತಾರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ,” ಎಂದು ವರದಿಯಾಗಿದೆ.
ಶಿಮಂತ್ ಹಾಗೂ ಅವರ ತಂದೆ ಆರ್. ಶಿವಕುಮಾರ್ ಬಿಲ್ಡರ್ ಆಗಿದ್ದು, ಕುಟುಂಬ ಸಮೇತ ಯಮಲೂರಿನ ಕೆಂಪಾಪುರದ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಅಂಬಿಕಾ ಎಂಬುವವರು ಅಡುಗೆ ಕೆಲಸ ಮಾಡುತ್ತಿದ್ದರು. ನೇಪಾಳದ ಮಯಾವಿಷ್ಣು ಹಾಗೂ ವಿಕಾಸ್ ಎಂಬುವವರ ಮೂಲಕ 20 ದಿನಗಳ ಹಿಂದೆ ಹೌಸ್ ಕೀಪಿಂಗ್ ಕೆಲಸಕ್ಕೆ ದಿನೇಶ್ ಹಾಗೂ ಕಮಲಾ ಸೇರಿಕೊಂಡಿದ್ದರು.
ಜ.25ರಂದು ಶಿಮಂತ್ ಕುಟುಂಬ ಸಮೇತ ಸಂಬಂಧಿಕರೊಬ್ಬರ ಭೂಮಿ ಪೂಜೆಗಾಗಿ ‘ಎಚ್’ ಕ್ರಾಸ್‌ಗೆ ತೆರಳಿದ್ದರು. ಮನೆಯಲ್ಲಿ ಮನೆಕೆಲಸದವರು ಮಾತ್ರ ಇದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಶಿಮಂತ್‌ಗೆ ಕರೆ ಮಾಡಿದ್ದ ಅಡುಗೆ ಕೆಲಸದಾಕೆ ಅಂಬಿಕಾ, ದಿನೇಶ್ ದಂಪತಿ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದಿದ್ದರು. ಆತಂಕದಿಂದ ಮನೆಗೆ ಬಂದ ಶಿಮಂತ್ ಬೆಡ್ ರೂಂ ಪರಿಶೀಲಿಸಿದಾಗ ಕಬ್ಬಿಣದ ಸಲಾಕೆಯಿಂದ ಲಾಕರ್ ಮೀಟಿ ನಗದು ಹಾಗೂ ಕೆಜಿಗಟ್ಟಲೆ ಆಭರಣ ದೋಚಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದಿನೇಶ್ ದಂಪತಿ ಸಂಚು ರೂಪಿಸಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಿಗೆ ಬೇರೆಯವರು ಸಹಕಾರ ನೀಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.













