ವಿದ್ಯುತ್ ಶಾಕ್‌ನಿಂದ ಗಂಭೀರಗಾಯ ಗೊಂಡ ಯುವಕ ದೀಕ್ಷಿತ್ ಮೃತ್ಯು
ಪುತ್ತೂರು: ಇಲ್ಲಿನ ಪ್ರಗತಿ ಆಸ್ಪತ್ರೆಗೆ ಬಣ್ಣ ಬಳಿಯುತ್ತಿದ್ದ ಸಂದರ್ಭ ಕಟ್ಟಡದ ಪಕ್ಕದಲ್ಲೇ ಇದ್ದ ವಿದ್ಯುತ್ ಟಿ.ಸಿ.ಗೆ ಪೈಂಟ್ ಚೆಲ್ಲಿ ಅದರಿಂದ ಹೊಮ್ಮಿದ ಬೆಂಕಿಯ ಜ್ವಾಲೆಗೆ ಹಾಗೂ ವಿದ್ಯುತ್ ಶಾಕಿಗೆ ತುತ್ತಾಗಿದ್ದ ದೀಕ್ಷಿತ್ ಫೆ.10 ರಂದು ಮೃತಪಟ್ಟಿದ್ದಾರೆ. ಯುವಕ ದೀಕ್ಷಿತ್ ಮೃತ ದೇಹವನ್ನು ಆಸ್ಪತ್ರೆಯ ಬಿಲ್ ಪಾವತಿಸದೆ ನೀಡುವುದಿಲ್ಲ ಎಂದಿದ್ದ ಮಂಗಳೂರಿನ ಆಸ್ಪತ್ರೆಯವರು ಆ ಬಳಿಕ ಡಿಸಿ ಅವರ ಸೂಚನೆಯಂತೆ ಆಸ್ಪತ್ರೆಯವರು ಹಸ್ತಾಂತರಿಸಿದ್ದಾರೆ.2 ಲಕ್ಷದ 90 ಸಾವಿರ ಕೊಡಬೇಕೆಂಬ ಆಸ್ಪತ್ರೆಯ ಸಿಬಂದಿಗಳು ಬಳಿಕ 50 ಸಾವಿರ ನೀಡಿದ ಬಳಿಕ ಶವ ಬಿಟ್ಟು ಕೊಟ್ಟರು.
ಪ್ರಗತಿ ಆಸ್ಪತ್ರೆಗೆ ಹೊಂದಿಕೊಂಡಂತೆ ಟಿ.ಸಿ ಇದ್ದು ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದಿದ್ದರಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಮೊದಲು ಹಣ ಪಾವತಿಸದೇ ಮೃತ ದೇಹ ನೀಡುವುದಿಲ್ಲ ಎಂದಿದ್ದ ಆಸ್ಪತ್ರೆಯವರು ದಕ ಜಿಲ್ಲಾಧಿಕಾರಿ ಹಾಗೂ ಪುತ್ತೂರು ವಿಭಾಗಾಧಿಕಾರಿಯವರು ಸಕಾಲದಲ್ಲಿ ಮದ್ಯಪ್ರವೇಶಿಸಿದ ಕಾರಣ ಮೃತ ದೇಹ ಹಸ್ತಾಂತರಿಸಲು ಒಪ್ಪಿಕೊಂಡಿದ್ದಾರೆ.
ಮಂಗಳೂರಿನ ಖಾಸಗಿ ಅಸ್ಪತ್ರೆಯವರು ರೂ 2 ಲಕ್ಷದ 90 ಸಾವಿರ ರುಪಾಯಿ ಬಿಲ್ ಪಾವತಿಸದೇ ಮೃತ ದೇಹ ನೀಡಲು ನಿರಾಕರಿಸಿದಾಗ ಪುತ್ತೂರು ತಾಲೂಕು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹಾಗೂ ಇತರ ಮುಖಂಡರು ಮತ್ತು ದೀಕ್ಷಿತ್ ಅವರ ಗೆಳೆಯರ ಬಳಗ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರನ್ನು ಭೇಟಿಯಾಗಿ ಶವ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ್ದರು. ಬಳಿಕ ಪೈಂಟ್ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು 50ಸಾವಿರ ಪಾವತಿಸಿದ್ದಾರೆ ಎನ್ನಲಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಯುವಕನ ತಂದೆ ಮೃತ ಪಟ್ಟಿದ್ದು ಆಗಲೂ ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಿತ್ತು. ಆ ಬಿಲ್ಲನ್ನು ಪಾವತಿಸಲು ಖಾಸಗಿ ಪೈನಾನ್ಸ್’ನಿಂದ ರೂ 3 ಲಕ್ಷ ಸಾಲ ತೆಗೆದು ಅಸ್ಪತ್ರೆ ಬಿಲ್ ಪಾವತಿಸಿದ್ದರು. ಆ ಸಾಲ ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದ್ದು ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ ಎಂಬ ವಿಷಯವನ್ನು ಅವರು ಅಧಿಕಾರಿಗಳಿಗೆ ತಿಳಿಸಿದ್ದರು. ಮಾನವೀಯ ನೆಲೆಯಲ್ಲಿ ತ್ವರಿತವಾಗಿ ಸ್ಪಂದಿಸಿದ ಜಿಲ್ಲಾಡಳಿತಕ್ಕೆ ಮೃತನ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಅವಘಡ ಸಂಭವಿಸಿದ ಕೂಡಲೇ ಪುತ್ತೂರಿನ ಪ್ರಗತಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು.