

ಪುತ್ತೂರು: ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಗೆ ದರೋಡೆ ಮಾಡಲು ಯತ್ನ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ಪುತ್ತೂರು ನಗರ ಪೊಲೀಸರು ದಂಪತಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪುತ್ತೂರಿನ ಮುಡೂರು ನಿವಾಸಿ ಕಾರ್ತಿಕ್ ರಾವ್ (31), ಪತ್ನಿ ಕೆ.ಎಸ್.ಸ್ವಾತಿ ರಾವ್ (25) ಎಂದು ಗುರುತಿಸಲಾಗಿದೆ. ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆ ವಿವರ:
ಡಿ17 ರ ಮಧ್ಯರಾತ್ರಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಅಪರಿಚಿತರು ಪುತ್ತೂರು ಕಸಬಾ ನಿವಸಿ ನಿವೃತ್ತ ಪ್ರಾಂಶುಪಾಲರಾದ ಎ.ವಿ.ನಾರಾಯಣ (84) ಎಂಬುವವರ ಮನೆಗೆ ಹಿಂಬಾಗಿಲಿನ ಮೂಲಕ ಪ್ರವೇಶ ಮಾಡಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಲು ಯತ್ನ ಮಾಡಿ, ದಂಪತಿಯನ್ನು ಬೆದರಿಸಿದ್ದರು.
ಈ ಸಂದರ್ಭದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿದ್ದು, ಪಿರ್ಯಾದಿದಾರರು ಜೋರಾಗಿ ಕಿರುಚಿಕೊಂಡಿದ್ದು, ಆಗ ಅಕ್ಕಪಕ್ಕದವರು ಜಾಗೃತರಾಗುವ ಭೀತಿಯಿಂದ ಯಾವುದೇ ವಸ್ತುಗಳನ್ನು ಕದಿಯದೆ ಆರೋಪಿಗಳು ಪರಾರಿಯಾಗಿದ್ದರು.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ಮಾಡಿದ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಕೆ ಮಾಡಿದ ಮೋಟಾರು ಸೈಕಲನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.













