Deepfake: AI ದುರ್ಬಳಕೆ: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೂ ತಪ್ಪದ ಡೀಪ್‌ಫೇಕ್ ಕಾಟ


Deepfake: ನಟ, ನಟಿಯರನ್ನು ಕಾಡುತ್ತಿದ್ದ ಡೀಪ್ ಫೇಕ್ ಬಿಸಿ ಈಗ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ (Sudha Murty) ಅವರಿಗೂ ತಟ್ಟಿದೆ. ಹೂಡಿಕೆ ಹಗರಣ ಸಂಬಂಧ ತಮ್ಮ ಡೀಪ್ ಫೇಕ್ (Deepfake) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯ ಸಂಸತ್ ಭವನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಐ ದುರ್ಬಳಕೆ ಮಾಡಿಕೊಂಡು ನಕಲಿ ವಿಡಿಯೋ (Fake Video) ಸೃಷ್ಟಿಸಲಾಗಿದೆ. ಎಲ್ಲಾ ಹೂಡಿಕೆದಾರರಿಗೆ ನಾನು ಹೇಳೋದೇನಂದ್ರೆ, ಯಾವುದೇ ಸಮಯದಲ್ಲೂ ನಾನು ಹೂಡಿಕೆ ಬಗ್ಗೆ ಮಾತನಾಡಲ್ಲ. ಹೂಡಿಕೆ ವಿಚಾರದಲ್ಲಿ ನನ್ನ ಮುಖ ಎಂದಿಗೂ ನೀವು ನೋಡಲ್ಲ. ನೀವು ನೋಡಿದ್ದರೆ, ಅದು ಖಂಡಿತಾ ನಕಲಿ ವಿಡಿಯೋ ಅಂತಾ ಹೇಳಿದ್ದಾರೆ.
ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಿ. ಬ್ಯಾಂಕುಗಳಲ್ಲಿ ಆ ಖಾತೆ ಅಥವಾ ಯೋಜನೆಯ ಬಗ್ಗೆ ಖಚಿತಪಡಿಸಿಕೊಳ್ಳಿ, ನಂತರ ಹೂಡಿಕೆ ಮಾಡಿ. ಆದ್ರೆ ನನ್ನ ವಿಷಯಲ್ಲಿ ಆ ರೀತಿ ಇರೋದಿಲ್ಲ. ಹಣದ ಹೂಡಿಕೆ ಕುರಿತು ವಿಡಿಯೋದಲ್ಲಿ ನನ್ನ ಮುಖ ನೋಡಿದ್ದೀರಿ ಅಥವಾ ಧ್ವನಿ ಕೇಳಿದ್ದೀರಿ ಅಂದ್ರೆ ಖಂಡಿತಾ ಅದು ನಕಲಿ ಸುದ್ದಿ ಅಂತ ಸ್ಪಷ್ಟಪಡಿಸಿದ್ದಾರೆ. ಸೈಬರ್ ವಂಚಕನ ಕರೆ ಬಂದಿತ್ತುಕೆಲ ದಿನಗಳ ಹಿಂದಷ್ಟೇ ಸುಧಾ ಮೂರ್ತಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಸೈಬರ್ ವಂಚಕರು ವಂಚಿಸಲು ಯತ್ನಿಸಿದ ಘಟನೆ ನಡೆದಿತ್ತು. ಈ ಕುರಿತು ಸಿಸಿಬಿ ಸೈಬರ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಸೆಪ್ಟೆಂಬರ್ 9 ರಂದು ಸುಧಾಮೂರ್ತಿ ಅವರಿಗೆ ಅಪರಿಚಿತ ನಂಬರ್‌ನಿಂದ ಕರೆ ಮಾಡಿದ್ದ ವ್ಯಕ್ತಿ, ತಾನು ದೂರ ಸಂಪರ್ಕ ಇಲಾಖೆ (ಟೆಲಿಕಾಂ) ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ʻನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಖರೀದಿಸಿದ್ದು, ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ, ನಿಮ್ಮ ವೈಯಕ್ತಿಕ ಮಾಹಿತಿ ನೀಡಿʼ ಎಂದಿದ್ದ. ಮಾಹಿತಿ ನೀಡದಿದ್ದರೆ ಈಗ ಬಳಕೆ ಮಾಡುತ್ತಿರುವ ಸಿಮ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ.ಸೈಬರ್ ವಂಚಕರ ಕೃತ್ಯ ಎಂದು ಎಚ್ಚೆತ್ತ ಸುಧಾಮೂರ್ತಿ ಕರೆ ಸ್ಥಗಿತಗೊಳಿಸಿದ್ದರು. ಜತೆಗೆ, ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಬಳಿಕ ಠಾಣೆಯಲ್ಲೂ ದೂರು ನೀಡಿದ್ದರು.
ಏನಿದು ಡೀಪ್‌ಫೇಕ್?ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್ ಟೂಲ್ ಮೂಲಕ ಜೋಡಿಸುವುದು ಹಳೇಯ ವಿಚಾರ. ಈ ಫೋಟೋಗಳನ್ನು ನೋಡುವಾಗ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ವಿಡಿಯೋ ಎಷ್ಟು ನೈಜತೆ ಇರುತ್ತದೆ ಅಂದರೆ ವ್ಯಕ್ತಿಯ ದೇಹಕ್ಕೂ ಮತ್ತು ಮುಖಕ್ಕೆ ನೇರ ಸಂಬಂಧ ಇದ್ದಂತೆ ಇರುತ್ತದೆ. ಮೂಲ ವಿಡಿಯೋ ಬೇರೆ ಆಗಿದ್ದರೂ ಈ ವ್ಯಕ್ತಿಯೇ ವಿಡಿಯೋದಲ್ಲಿ ನಟಿಸುತ್ತಿದ್ದಂತೆ ಬಿಂಬಿಸಲಾಗುತ್ತದೆ.

Comments are closed.