ಮಂಗಳೂರು: ಜೈಲಲ್ಲಿ ಗಲಾಟೆ: ನಾಲ್ಕು ಮೊಬೈಲ್‌ ಪತ್ತೆ

Share the Article

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ನಾಲ್ಕು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾಧೀನ ಕೈದಿಗಳು ಅಡ್ಡಿಪಡಿಸಿದ್ದರು. ಮತ್ತೆ ಅನಿರೀಕ್ಷಿತ ತಪಾಸಣೆ ಮಾಡಲಾಯಿತು. ಈ ವೇಳೆ ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್‌ಗಳನ್ನು ಅಲ್ಲಾಡಿ ಸುತ್ತಾ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡಿದರು.ಕೈದಿಗಳನ್ನು ಬಂಧಿಸಲು ಸಿಬ್ಬಂದಿ ಪ್ರಯತ್ನಿಸಿದಾಗ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತು.

ಮಂಗಳೂರು ನಗರ ಪೊಲೀಸರು, ವಿಶೇಷ ಕಾರ್ಯಪಡೆ ಹಾಣೆಯ ಅಧಿಕಾರಿ, ಕಾಬಂದಿ ಕಾರಾಗೃಹಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇದೇ ಸಮಯದಲ್ಲಿ ಮೊಬೈಲ್ ಬಳಕೆ ಬಗ್ಗೆ ಗುಪ್ತ ಮಾಹಿತಿಗಳಿದ್ದ ಕೊಠಡಿಗಳಿಗೆ ಹೋಗಿ ತಪಾಸಣೆ ಮಾಡಲಾಯಿತು. ಆಗ ಎರಡು ಕೊಠಡಿಗಳಲ್ಲಿ ಒಟ್ಟು ನಾಲ್ಕು ಮೊಬೈಲ್ ಪತ್ತೆಯಾಗಿದೆ ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಲಾಟೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿಯಂತ್ರಣಗೊಂಡ ಅನಂತರ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಗಲಾಟೆಯಲ್ಲಿ ‘ಎ’ ವಿಭಾಗದಿಂದ ಮೊಯಿದ್ದಿನ್ ಫರಾದ್, ಸರ್ಫರಾಜ್, ಮೊಹಮ್ಮದ್ ಅಲ್ತಾಫ್, ಇಮ್ಮಿಯಾಜ್, ಅಬ್ದುಲ್ ನೌಜೀದ್, ಮೊಹಮ್ಮದ್ ಸಾಯಿಲ್ ಅಕ್ರಂ ಮತ್ತು ಮಹಮ್ಮದ್ ಹನೀಫ್ ಹಾಗೂ ‘ಬಿ’ ವಿಭಾಗ’ ದಿಂದ ಲತೇಶ್ ಜೋಗಿ, ಮಂಜುನಾಥ, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ, ಗುರುರಾಜ ಹಾಗೂ ಸುಮಂತ ಕಂಡು ಬಂದಿದ್ದು ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ.

Comments are closed.