Telangana : ಗ್ರಾ. ಪಂ ಚುನಾವಣೆಯಲ್ಲಿ ಹೀನಾಯ ಸೋಲು -ದೇವರ ಫೋಟೋ ಹಿಡಿದು ಮನೆ ಮನೆಗೆ ತೆರಳಿ ಹಣ ವಾಪಸ್ ಕೇಳಿದ ಅಭ್ಯರ್ಥಿ


Telangana: ಚುನಾವಣೆಗಳಲ್ಲಿ ಇಂದು ಹಣ ಹಂಚಿ ಗೆಲ್ಲುವವರೇ ಹೆಚ್ಚು. ಅದರಲ್ಲೂ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಂತ ಚುನಾವಣೆಗಳಲ್ಲಿ ಈ ರೀತಿಯ ಪ್ರಕರಣಗಳನ್ನು ಹೆಚ್ಚಾಗಿ ಕಾಣಬಹುದು. ಅಂತೆಯೇ ಇಲ್ಲೊಬ್ಬ ಅಭ್ಯರ್ಥಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ವೋಟ್ ಪಡೆಯಲು ಮನೆಮನೆಗೆ ಹಣವನ್ನು ಹಂಚಿದ್ದಾನೆ. ಇಷ್ಟಾದರೂ ಚುನಾವಣೆಯಲ್ಲಿ ಆತ ಹೀನಾಯವಾಗಿ ಸೋಲನ್ನು ಕಂಡಿದ್ದಾನೆ. ಈ ಬೆನ್ನಲ್ಲೇ ಅವನು ಮನೆ ಮನೆಗೆ ತೆರಳಿ ಕೊಟ್ಟ ಹಣವನ್ನು ವಾಪಸ್ ಕೇಳಿದಂತಹ ಘಟನೆ ನಡೆದಿದೆ.

ಹೌದು, ತೆಲಂಗಾಣದ (Telangana) ನಲ್ಗೊಂಡ (Nalgonda) ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ಪಂಚಾಯತ್ ಚುನಾವಣೆಯಲ್ಲಿ (Panchayat Election) ಹೀನಾಯವಾಗಿ ಸೋಲನ್ನನುಭವಿಸಿದ ಅಭ್ಯರ್ಥಿಯೊಬ್ಬರು ಚುನಾವಣೆಗೆ ಮೊದಲು ತಾವು ಜನರಿಗೆ ಹಂಚಿದ್ದ ಹಣವನ್ನು ಮನೆ ಮನೆಗೆ ತೆರಳಿ ವಾಪಸ್ ಕೇಳಿ ದಾಂಧಲೆ ನಡೆಸಿದ್ದಾರೆ.
ಅಂದಹಾಗೆ ಭಾರತ ರಾಷ್ಟ್ರ ಸಮಿತಿ (BRS) ಬೆಂಬಲದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಲ್ಲೂರಿ ಬಾಲರಾಜು, ಚುನಾವಣಾ ಪ್ರಚಾರದ ಸಮಯದಲ್ಲಿ ಮತದಾರರಿಗೆ ಹಣ ವಿತರಿಸಿದ್ದರು. ಆದರೂ ಅವರು ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ.
ಈ ಫಲಿತಾಂಶದಿಂದ ನೊಂದ ಬಾಲರಾಜು ಗ್ರಾಮದಲ್ಲಿ ದೇವರ ಫೋಟೋವನ್ನು ಹಿಡಿದು ಮತದಾರರ ಬಳಿ ಹೋಗಿ ತಾವು ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಾರೆ. ಜನರ ಬಳಿ ದೇವರ ಫೋಟೋ ತೋರಿಸಿ, ನೀವು ನನಗೆ ಮತ ಹಾಕಿದ್ದರೆ, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ. ಇಲ್ಲದಿದ್ದರೆ ನಾನು ನಿಮಗೆ ನೀಡಿದ ಹಣವನ್ನು ಹಿಂತಿರುಗಿಸಿ ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಬಾಲರಾಜು ಇದೇ ರೀತಿ ಹಲವಾರು ಮತದಾರರಿಂದ ಹಣವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Comments are closed.