60 ಅಡಿ ನಾಲೆಗೆ ಬಿದ್ದ ಕಾಡಾನೆ, 3 ದಿನ ನರಳಾಟ: ಹೈಡ್ರಾಲಿಕ್ ಕ್ರೇನ್, ಕಂಟೈನರ್ ಇಳಿಸಿ ರಕ್ಷಣೆ

Share the Article

ಮಳವಳ್ಳಿ, ಮಂಡ್ಯ: ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಪಯನಿಯರ್ ವಿದ್ಯುತ್‌ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಮಂಗಳವಾರ ಯಶಸ್ವಿಯಾಗಿ ಮೇಲೆ ತರಲಾಯಿತು.

ಶನಿವಾರ ರಾತ್ರಿ ವಿದ್ಯುತ್ ಘಟಕದ ಬಳಿ ಸುತ್ತಾಡುತ್ತಿದ್ದ 10 ರಿಂದ 12 ವರ್ಷದ ಗಂಡು ಕಾಡಾನೆಯು ನೀರು ಕುಡಿಯಲು ಗೇಟ್ ಮೂಲಕ ನಾಲೆಗೆ ಇಳಿದಿತ್ತು. ಆದರೆ, ನೀರಿನ ಹರಿವಿನ ರಭಸಕ್ಕೆ ವಾಪಸ್‌ ಕಾಲುವೆಯಿಂದ ಮೇಲೆ ಬರಲು ಆನೆಯು ಪರದಾಡಿತ್ತು. ಕಳೆದ ಮೂರು ದಿನಗಳಿಂದ ಕಾಲುವೆಯಲ್ಲಿಯೇ ಇದೇ ಸ್ಥಿತಿಯಲ್ಲಿಯೇ ಓಡಾಡಿ ನಿತ್ರಾಣಗೊಂಡಿತ್ತು.

ಸೋಮವಾರ ದಿನವಿಡೀ ನಡೆಸಿದ ಕಾರ್ಯಾಚರಣೆ ವಿಫಲವಾಗಿತ್ತು. ಆದರೆ ನಿನ್ನೆ ಮಂಗಳವಾರ ಕ್ರೇನ್ ಮತ್ತು ಡ್ರೋನ್ ಸಹಾಯದಿಂದ ಕಾರ್ಯಾಚರಣೆ ಪ್ರಾರಂಭವಾಯಿತು. ಬೆಂಗಳೂರಿನಿಂದ ಬಂದಿದ್ದ ಬೃಹತ್ ಕ್ರೇನ್, ಸ್ಥಳೀಯವಾಗಿ 2 ಕ್ರೇನ್‌ಗಳ ಮೂಲಕ ಮೊದಲಿಗೆ ಒಂದು ಕಂಟೇನ‌ರ್ ಅನ್ನು ಕಾಲುವೆಗೆ ಇಳಿಸಿ ಆನೆಯನ್ನು ಮೇಲೆತ್ತುವ ಪ್ರಯತ್ನ ನಡೆಸಲಾಯಿತು. ಆದರೆ ಅದು ಫಲ ನೀಡಲಿಲ್ಲ.
ಮತ್ತೆ ನಾಲೆಯಲ್ಲಿ ನೀರು ತಗ್ಗಿಸಿ, ಮಧ್ಯಾಹ್ನದ ವೇಳೆ ಪಟಾಕಿ ಸಿಡಿಸಿ ಕಾಲುವೆ ಮಧ್ಯಭಾಗಕ್ಕೆ ಆನೆ ಬಂದ ನಂತರ, ತಜ್ಞರ ತಂಡ ಕಾಡಾನೆಗೆ ಅರಿವಳಿಕೆ ಮದ್ದು ನೀಡಿದರು. ಸುಮಾರು 30 ನಿಮಿಷ ಆನೆಯು ಸ್ಥಳದಲ್ಲಿ ಶತಪಥ ಸುತ್ತಾಡಿ ಪ್ರಜ್ಞೆ ಕಳೆದುಕೊಂಡು ಮಲಗಿದ ಬಳಿಕ ಆನೆಗೆ ಅಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿದರು.

ಜತೆಗೆ ರಕ್ಷಣಾ ಸಿಬ್ಬಂದಿ ಕ್ರೇನ್ ಮತ್ತು ಹಗ್ಗಗಳನ್ನು ಬಳಸಿ, ಕಂಟೇನರ್ ಹಾಗೂ ಸ್ಟೆಚ‌ರ್ ಮೇಲೆ ಆನೆಯನ್ನು ಮಲಗಿಸಿ, ಎಚ್ಚರಿಕೆಯಿಂದ 60 ಅಡಿ ಆಳದ ಕಾಲುವೆ ಮೇಲೆ ತಂದರು. ನಂತರ ಆನೆ ಸುಧಾರಿಸಿಕೊಂಡ ಬಳಿಕ ಪಕ್ಕದಲ್ಲೇ ಇದ್ದ ಕಾವೇರಿ ವನ್ಯಜೀವಿ ಅರಣ್ಯಕ್ಕೆ ಅದನ್ನು ಸುರಕ್ಷಿತವಾಗಿ ಬಿಡಲಾಯಿತು.

Comments are closed.