Health tips: ಅನಗತ್ಯವಾಗಿ ಮಾಡಲಾಗುತ್ತಿದೆ ಗರ್ಭಾಶಯ ತೆಗೆಯುವ ಶಸ್ತ್ರ ಚಿಕಿತ್ಸೆ : ಸಂಶೋಧನೆಯಿಂದ ಬಹಿರಂಗ! ಇದು ನಿಜವೇ?

Share the Article

Health tips: ಗರ್ಭಾಶಯವು ಮಹಿಳೆಯರಿಗೆ ಅತ್ಯುತ್ತಮ ನೈಸರ್ಗಿಕ ಉಡುಗೊರೆಗಳಲ್ಲಿ ಒಂದಾಗಿದೆ. ಸಂತಾನದ ರೂಪದಲ್ಲಿ ಹೊಸ ಜೀವದ ಸೃಷ್ಟಿಯ ಮೂಲಕ ಈ ಭೂಮಿಯ ಮೇಲಿನ ಮನುಷ್ಯರ ಜೀವನ ಚಕ್ರ ಮುಂದುವರಿಯಬೇಕು. ಅಂದರೆ, ಮಕ್ಕಳ ಜನನವು ಸೃಷ್ಟಿ ನಿಂತು ಹೋದರೆ ಭೂಮಿಯ ಮೇಲಿನ ಮನುಷ್ಯನ ಅಸ್ತಿತ್ವವೇ ನಶಿಸಿ ಹೋಗುತ್ತದೆ. ಈ ಮಹತ್ತರ ಜವಾಬ್ದಾರಿಯ ಕಾರ್ಯವನ್ನು ಗರ್ಭಾಶಯದ ಕೊಡುಗೆಯ ಮೂಲಕ ಸೃಷ್ಟಿಯು ಸ್ತ್ರೀಯರಿಗ ವಹಿಸಿದೆ.

ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದು ನಿಜವಾಗಿದ್ದರೂ, ಭಾರತದಲ್ಲಿ ಗರ್ಭಾಶಯವನ್ನು ತೆಗೆಯುವ ಶಸ್ತ್ರಚಿಕಿತ್ಸೆಯ ಪ್ರಮಾಣವು ಅನಗತ್ಯವಾಗಿ ಗಣನೀಯ ಪ್ರಮಾಣದಲ್ಲಿ ವೃದ್ಧಿಯಾಗಿದೆ! ಒಟ್ಟು ಶಸ್ತ್ರಚಿಕಿತ್ಸೆಗಳ ಪೈಕಿ ಶೇ.66.8ರಷ್ಟು ಶಸ್ತ್ರಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಈ ಶಸ್ತ್ರಚಿಕಿತ್ಸೆಗಳಲ್ಲಿ ಸುಮಾರು 95% ಅನಗತ್ಯವಾಗಿ ಮಾಡಲಾಗುತ್ತದೆ.

ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಘಗಳ ಒಕ್ಕೂಟ (FOGSI) ಮತ್ತು ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್ನೆಸ್ ಕೌನ್ಸಿಲ್ ಪ್ರಕಟಿಸಿದ ಶ್ವೇತಪತ್ರದಲ್ಲಿ ಈ ಅವಲೋಕನಗಳನ್ನು ಮಾಡಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ಹೆಚ್ಚಿನ ಮಹಿಳೆಯರು ಅನಕ್ಷರಸ್ಥರು ಗ್ರಾಮೀಣ ಪ್ರದೇಶದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಬಂಜೆತನ ಹೊಂದಿರುವ ಮಹಿಳೆಯರಲ್ಲಿ ಸಾಮಾನ್ಯ ಸ್ಥಿತಿಗಳಲ್ಲಿ ಫೈಬ್ರಾಯ್ಡ್‌ಗಳು, ಅನಿಯಮಿತ ಗರ್ಭಾಶಯದ ರಕ್ತಸ್ರಾವ, ಗರ್ಭಾಶಯದ ಹಿಗ್ಗುವಿಕೆ, ಮುಟ್ಟಿನ ನೋವು ಮತ್ತು ಗರ್ಭಾಶಯದ ಗೆಡ್ಡೆಗಳು ಸೇರಿವೆ.

ಹೆಚ್ಚಿನ ಆದಾಯದ ದೇಶಗಳಲ್ಲಿ, 45 ವರ್ಷಕ್ಕಿಂತ ಮೇಲ್ಪಟ್ಟ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಗರ್ಭಾಶಯ ತೆಗೆಯುವ ಶಸ್ತ್ರ ಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ವರದಿ ಹೇಳಿದೆ, ಆದರೆ ಭಾರತದಲ್ಲಿ, ಕಿರಿಯ ಮಹಿಳೆಯರಲ್ಲಿ ಶಸ್ತ್ರಚಿಕಿತ್ಸೆ ಹೆಚ್ಚು ಸಾಮಾನ್ಯವಾಗಿದೆ. ಬಿಹಾರ್ ನ 24 ವರ್ಷದ ಒಬ್ಬ ಮಹಿಳೆಯ ಗರ್ಭಾಶಯವನ್ನು ವೈದ್ಯರು ತೆಗೆದುಹಾಕಿದರು. ತದನಂತರ, ಆಕೆಗೆ ಹೊಟ್ಟೆಗೆ ಸಂಬಂಧಿಸಿದ ಬೇರೆ ಬೇರೆ ರೋಗಗಳು ಉದ್ಭವಿಸಿ ಸುಮಾರು ಏಳು ಬಾರಿ ಶಸ್ತ್ರ ಕ್ರಿಯೆಗಳನ್ನು ಮಾಡುವಂಥ ಪರಿಸ್ಥಿತಿ ಉಂಟಾದ ಪ್ರಕರಣ ಇತ್ತೀಚೆಗೆ ವರದಿಯಾಗಿದೆ.

ಭಾರತದಲ್ಲಿ, ಅನಿಯಮಿತ ಮುಟ್ಟಿನ ರಕ್ತಸ್ರಾವವು ಗರ್ಭಾಶಯದ ಶಸ್ತ್ರ ಕ್ರಿಯೆಯ ಪ್ರಮುಖ ಕಾರಣವಾಗಿದೆ, ಆದರೆ, ಇದು ಎರಡನೇ ಸಾಮಾನ್ಯ ಸ್ತ್ರೀರೋಗ ಶಸ್ತ್ರಚಿಕಿತ್ಸೆಯಾಗಿದೆ. ಆದರೆ ಶಸ್ತ್ರಚಿಕಿತ್ಸೆಯ ಹೊರತಾಗಿ ಇತರ ಪರಿಹಾರಗಳೂ ಇರಬಹುದೆಂದು ತಜ್ಞರು ಹೇಳುತ್ತಾರೆ. (ಮೂಲತಃ ಶಸ್ತ್ರ ಕ್ರಿಯೆಗೆ ಇದೊಂದು ಕಾರಣವೇ ಅಲ್ಲ!). ಈ ವಿಷಯದ ಕುರಿತು ಮಾತನಾಡಿದ FOGSI ಅಧ್ಯಕ್ಷ ಹೃಷಿಕೇಶ್ ಪೈ, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕಾಗಿ ವೈದ್ಯಕೀಯ ವೃತ್ತಿಪರರು ಶಸ್ತ್ರಚಿಕಿತ್ಸೆಯಲ್ಲದ, ದೀರ್ಘಕಾಲೀನ ಆಯ್ಕೆಗಳತ್ತ ಗಮನ ಹರಿಸಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ವೈದ್ಯರು ಜಾಗೃತಿ ಹಾಗೂ ಸಾಮರ್ಥ್ಯ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ದುರದೃಷ್ಟವಶಾತ್, ಅನೇಕ ರೋಗಿಗಳಲ್ಲಿಯೂ ಸ್ವಂತ ಇಚ್ಛೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಹೆಚ್ಚಿನ ಪ್ರವೃತ್ತಿ ಇದೆ. ವೈದ್ಯರು ಶಸ್ತ್ರಚಿಕಿತ್ಸೆಯ ಆಯ್ಕೆಯನ್ನು ಸೂಚಿಸಿದಾಗ, ಅನೇಕ ರೋಗಿಗಳು ಸುಲಭವಾಗಿ ಒಪ್ಪುತ್ತಾರೆ. ಭವಿಷ್ಯದಲ್ಲಿ ಗರ್ಭಾಶಯದ ಕ್ಯಾನ್ಸರ್ ಬರುವ ಬೆದರಿಕೆಯೊಡ್ಡಿ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮಹಿಳೆಯರನ್ನು ಒತ್ತಾಯಿಸುತ್ತಾರೆ. ರೋಗಿಗಳು ಎರಡನೇ ಅಭಿಪ್ರಾಯವನ್ನು ತೆಗೆದುಕೊಳ್ಳುವ ಯೋಚನೆಯನ್ನೇ ಮಾಡುವುದಿಲ್ಲ. ಅಥವಾ ಶಸ್ತ್ರ ಕ್ರಿಯೆ ನಿಜವಾಗಿಯೂ ಅಗತ್ಯವಿದೆಯೇ ಎಂದು ಯೋಚಿಸುವುದಿಲ್ಲ. ಅನೇಕ ಜನರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಒಂದು ಹೆಮ್ಮೆಯ ವಿಷಯವಾಗಿದೆ.

ಈ ಮಾನಸಿಕತೆ ಗರ್ಭಾಶಯದ ಶಸ್ತ್ರಕ್ರಿಯೆ ವಿಷಯದಲ್ಲಿ ಇನ್ನೂ ಸಾಮಾನ್ಯವಾಗಿದೆ. ಒಂದು ಮಗುವಾದ ನಂತರ, ಗರ್ಭಾಶಯವು ಕ್ರಿಯಾಹೀನ, ಅನುಪಯುಕ್ತ ಅಂಗವಾಗಿದೆ ಎಂದು ಮಹಿಳೆಯರು ಭಾವಿಸುತ್ತಾರೆ. ಅನೇಕ ಮಹಿಳೆಯರು ಪ್ರತಿ ತಿಂಗಳು ಭಾರೀ ಮುಟ್ಟಿನ ಚಕ್ರವನ್ನು ಅನುಭವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪುರುಷರೊಂದಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳುವ ಅಭ್ಯಾಸವು ಹೆಚ್ಚಿದೆ ಮತ್ತು ಪುರುಷರು ಋತುಚಕ್ರದ ಕಿರಿಕಿರಿ ಇಲ್ಲದೆ ಎಷ್ಟು ನಿರಾಳವಾಗಿ ಬದುಕುತ್ತಾರೆ ಎಂದುಕೊಳ್ಳುತ್ತಾರೆ! ಆದ್ದರಿಂದ, ಗರ್ಭಾಶಯ ತೆಗೆದು ತಾವೂ ಸಹ ಪುರುಷರಂತೆ ಕಿರಿಕಿರಿ ಇಲ್ಲದ ನಿರಾಳ ಜೀವನ ಬದುಕಬೇಕೆಂದು ಬಯಸುತ್ತಾರೆ.

ಇಂಥ ಅಸ್ವಾಭಾವಿಕ, ಅನೈಸರ್ಗಿಕ ಮತ್ತು ಅತಾರ್ಕಿಕ ಆಲೋಚನೆಗಳಿಂದಾಗಿ ವಿನಾಕಾರಣ ತಮ್ಮ ಗರ್ಭಾಶಯವನ್ನು ತೆಗೆದುಹಾಕಲು ತಾವಾಗಿಯೇ ವೈದ್ಯರಲ್ಲಿ ಕೇಳಿಕೊಳ್ಳುವ ಸಾಕಷ್ಟು ಮಹಿಳೆಯರನ್ನು ನಾನು ನನ್ನ ವೃತ್ತಿಯಲ್ಲಿ ಕಂಡಿದ್ದೇನೆ. ಇದು ಅತ್ಯಂತ ಗಂಭೀರ ಮತ್ತು ದುರದೃಷ್ಟಕರ ವಿಷಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಪ್ರತಿ ತಿಂಗಳ ವ್ಯಾಪಾರ ವಹಿವಾಟಿನ ಗುರಿ (ಟಾರ್ಗೆಟ್) ಇದ್ದು ಹಣ ಗಳಿಸುವುದೊಂದೇ ಉದ್ದೇಶವಾಗಿರುತ್ತದೆ. ಆದ್ದರಿಂದ, ಗರ್ಭಾಶಯದ ಶಸ್ತ್ರಕ್ರಿಯೆ ಅವರಿಗೆ ಹಣವನ್ನು ಗಳಿಸಲು ಒಂದು ಅವಕಾಶವಾಗಿದೆ.

ಯಾವುದೇ ಶಸ್ತ್ರಚಿಕಿತ್ಸೆಯು ದೇಹದ ಆರೋಗ್ಯಕ್ಕೆ ಆಘಾತಕಾರಿಯಾಗಿರುತ್ತದೆ ಮತ್ತು ಅದರ ಅಡ್ಡಪರಿಣಾಮಗಳು ಯಾವಾಗಲೂ ದೇಹದಲ್ಲಿ ಬೇರೆಡೆ ಪ್ರತಿಫಲಿಸುತ್ತವೆ. ಆದರೆ, ಶಸ್ತ್ರಚಿಕಿತ್ಸೆಯಿಂದಾಗಿ ಈ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಮಹಿಳೆಯರಿಗೆ ತಿಳಿದಿರುವುದಿಲ್ಲ ಮತ್ತು ಯಾವ ವೈದ್ಯರೂ ಅದನ್ನು ವಿವರಿಸುವುದಿಲ್ಲ. ಆದ್ದರಿಂದ, ರೋಗಿಗಳು ಸ್ವತಃ ಜಾಗರೂಕರಾಗಿರಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

ಇದನ್ನೂ ಓದಿ:Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ : ಮುಂಗಾರು ಹಿಂದೆ ಸರಿಯುವ ಸಾಧ್ಯತೆ

ಸುಮಾರು 95% ಗರ್ಭಕಂಠ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಬಹುದಾಗಿದೆ. ಇದಕ್ಕೆ ಹೋಮಿಯೋಪತಿ ಅಥವಾ ಆಯುರ್ವೇದ ಚಿಕಿತ್ಸೆ ವಿಧಾನಗಳನ್ನು ಅನುಸರಿಸಬೇಕು. ಈ ವಿಧಾನದಿಂದ ಗರ್ಭಾಶಯಕ್ಕೆ ಸಂಬಂಧಿಸಿದ ಎಲ್ಲ ತರಹದ ಕಾಯಿಲೆಗಳಿಗೆ ದುಷ್ಪರಿಣಾಮ ರಹಿತ ಔಷಧಿಗಳಿಂದಲೇ ಯಶಸ್ವಿಯಾಗಿ ಚಿಕಿತ್ಸೆ ಮಾಡಬಹುದು. ಅಷ್ಟೇ ಅಲ್ಲ, ಈ ಚಿಕಿತ್ಸಾ ವಿಧಾನಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಮಹಿಳೆಯರು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯಕವಾಗಿವೆ.

ಲೇಖನ: ಡಾ. ಪ್ರ. ಅ. ಕುಲಕರ್ಣಿ

Comments are closed.