Mangalore: ಸಿಎಂ ಫೋಟೋ ಬಳಸಿ ಕೋಮು ಪ್ರಚೋದಕ ಪೋಸ್ಟ್‌: ಮಹೇಶ್‌ ವಿಕ್ರಂ ಹೆಗ್ಡೆಗೆ ನ್ಯಾಯಾಂಗ ಬಂಧನ

Share the Article

Mangalore: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಬಳಕೆ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಕೋಮು ಪ್ರಚೋದನೆ ಪೋಸ್ಟ್‌ ಹಾಕಿದ ಆರೋಪದಲ್ಲಿ ಮಹೇಶ್‌ ವಿಕ್ರಂ ಹೆಗ್ಡೆ (45) ವಿರುದ್ಧ ಮೂಡುಬಿದಿರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಬಂಧನ ಮಾಡಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸೆ.9 ರಂದು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಕಾರ್ಡ್‌ ಹೆಸರಿನಲ್ಲಿ ” ಮಾನ್ಯ ಮುಖ್ಯ ಮಂತ್ರಿಗಳೇ ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೂರಿದವರ ಮಸೀದಿಯ ಮೇಲೆ ಬುಲ್ಡೋಜರ್‌ ನುಗ್ಗಿಸುವ ಧೈರ್ಯ ಮಾಡಿ ನೋಡಿ, ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂತಹ ಪ್ರಕರಣ ಮರುಕಳಿಸುವುದಿಲ್ಲʼ ಎನ್ನುವ ಪೋಸ್ಟ್‌ ಮಾಡಲಾಗಿತ್ತು.

ಅದಕ್ಕೆ ಸಿಎಂ ಫೋಟೋವನ್ನು ಎಡಿಟ್‌ ಮಾಡಿ ಹಾಕಲಾಗಿರುವುದಾಗಿ ಆರೋಪಿಸಲಾಗಿದೆ. ಪಿಎಸ್‌ಐ ಕೃಷ್ಣಪ್ಪ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿತ್ತು.

ಮೂಡುಬಿದಿರೆ ಪೊಲೀಸರು ಬೆಂಗಳೂರಿನಲ್ಲಿ ಮಹೇಶ್‌ ವಿಕ್ರಂನನ್ನು ವಶಕ್ಕೆ ಪಡೆದಿದ್ದು, ಸೆ.12 ರಂದು ಮೂಡಬಿದರೆಯ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಒಂದು ಪೋಸ್ಟ್‌ ವಿಚಾರವಾಗಿ ಬಂಧನವಾದರೆ ಆತ ಮಾಡಿರುವ ಎಲ್ಲಾ ಪೋಸ್ಟ್‌ಗಳ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Comments are closed.