

NDA: ಸತತ ಮೂರು ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಇದೀಗ ಕುಸಿತ ಕಾಣುತ್ತಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡುತ್ತಿದೆ. ಸಮೀಕ್ಷೆಗಳು ಕೂಡ ಇದನ್ನು ಹೌದು ಎಂದು ಹೇಳುತ್ತಿವೆ. ಆದರೆ ಈ ನಡುವೆ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ಏನಾದರೂ ನಡೆದರೆ NDA ಮೈತ್ರಿಕೂಟಕ್ಕೆ ಎಷ್ಟು ಸೀಟು ಬರಬಹುದು ಎಂಬ ಚರ್ಚೆಗಳು ಕೂಡ ಶುರುವಾಗಿವೆ. ಹಾಗಿದ್ರೆ ಚುನಾವಣೆ ಒಂದು ವೇಳೆ ನಡೆದರೆ ಎನ್.ಡಿ.ಎ ಎಷ್ಟು ಸೀಟನ್ನು ತನ್ನದಾಗಿಸಿಕೊಳ್ಳಬಹುದು? ಇಲ್ಲಿದೆ ನೋಡಿ ಕುತೂಹಲದ ವಿಚಾರ.
ಇಂಡಿಯಾ ಟುಡೇ-ಸಿ ವೋಟರ್, ಮೂಡ್ ಆಫ್ ದಿ ನೇಷನ್ ಈ ಕುರಿತಾಗಿ ಸಮೀಕ್ಷೆಯನ್ನು ನಡೆಸಿ ವರದಿ ಬಿಡುಗಡೆ ಮಾಡಿದೆ. ಈ ಸಮೀಕ್ಷೆ ಪ್ರಕಾರ, ಮೂರು ಪ್ರಮುಖ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವಿನ ಮೂಲಕ ಎನ್ ಡಿಎ ಮೈತ್ರಿಕೂಟ ಚೇತರಿಸಿಕೊಂಡಿದ್ದು, ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್ ಡಿಎ ಮೈತ್ರಿಕೂಟ 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆಯಂತೆ.
ಯಸ್, ಈಗ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 324 ಸೀಟ್ಗಳಲ್ಲಿ ಗೆದ್ದು, ಬಂಪರ್ ಬಹುಮತದೊಂದಿಗೆ ಮತ್ತೆ ಅಧಿಕಾರ ಗದ್ದುಗೆಗೆ ಏರಲಿದೆ ಎಂದು ಇಂಡಿಯಾ ಟುಡೇ ಹಾಗೂ ಸಿ – ವೋಟರ್ ಎಂಬ ಚುನಾವಣಾ ವಿಶ್ಲೇಷಣಾ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಸಮೀಕ್ಷಾ ವರದಿ ಹೇಳಿದೆ.
ಅಂದಹಾಗೆ 1 ಲಕ್ಷದ 52 ಸಾವಿರದ 38 ಮಂದಿಯನ್ನು ಸಿ-ವೋಟರ್ ಸಂಸ್ಥೆಯು ಪ್ರತ್ಯೇಕವಾಗಿ ಮಾತಾಡಿಸಿತ್ತು. ಅಲ್ಲಿಗೆ, 2 ಲಕ್ಷದ 6 ಸಾವಿರದ ಎಂಟು ನೂರಾ ಇಪ್ಪತ್ತಾರು ಮಂದಿಯ ಸಮೀಕ್ಷೆ ನಡೆಸಿ ಅವರ ಅನಿಸಿಕೆ – ಅಭಿಪ್ರಾಯಗಳ ಆಧಾರದಲ್ಲಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿರುವುದಾಗಿ, ‘ಇಂಡಿಯಾ ಟುಡೇ – ಸಿ ವೋಟರ್’ ಸಂಸ್ಥೆಗಳು ಹೇಳಿವೆ.
ಆಗಸ್ಟ್ 2025ರ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ರೇಟಿಂಗ್ ಸ್ವಲ್ಪ ಕುಸಿದಿದೆ ಎಂದು ತೋರಿಸುತ್ತದೆ. ಫೆಬ್ರವರಿ 2025ರ ಸಮೀಕ್ಷೆಯಲ್ಲಿ ಶೇ. 62ರಷ್ಟು ಪ್ರತಿಕ್ರಿಯಿಸಿದವರು ಅವರ ಕಾರ್ಯಕ್ಷಮತೆಯನ್ನ ‘ಉತ್ತಮ’ ಎಂದು ರೇಟಿಂಗ್ ಮಾಡಿದ್ದರೆ, ಈಗ ಆ ಅಂಕಿ ಅಂಶವು ಶೇ.58ರಷ್ಟಿದೆ. ಅಂದರೆ ಪ್ರಧಾನಿ ಮೋದಿ ಅವರ ವರ್ಚಸ್ಸು ಸ್ವಲ್ಪ ಕುಸಿತ ಕಂಡಿದೆ. ಆದರೂ ಕೂಡ ಜನ NDA ಮೈತ್ರಿಕೂಟವನ್ನೇ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ
ಇನ್ನು 2024 ರ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ 240 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಸ್ವಂತವಾಗಿ ಸರ್ಕಾರ ರಚಿಸಲು ಸರಳ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳಿಗೆ 32 ಸ್ಥಾನಗಳ ಕೊರತೆಯಾಗಿತ್ತು. ಈ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಬೆಂಬಲವನ್ನು ಸೂಚಿಸಿ ಪ್ರಧಾನಿ ಮೋದಿ ಅವರು ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಹಾಯ ಹಸ್ತ ಚಾಚಿದ ವಿಚಾರ ಎಲ್ಲರಿಗೂ ತಿಳಿದಿದೆ.













