ನಂ.1 ಗೃಹ ಸಚಿವ ಯಾರೆಂದು ಚಾಟ್ ಜಿಪಿಟಿ ಕೇಳಿ: ಜಿ.ಪರಮೇಶ್ವರ್, ನೀಡಿದ್ರು ಅಚ್ಚರಿ!

ತುಮಕೂರು: ಚಾಟ್ ಜಿಪಿಟಿಯನ್ನು, ದೇಶದಲ್ಲಿ ನಂಬರ್ ಒನ್ ಗೃಹ ಸಚಿವರು ಯಾರು ಎಂದು ಕೇಳಿದರೆ ಅದು ಏನು ಉತ್ತರ ಕೊಡುತ್ತೆ? ಕುತೂಹಲ ಇದ್ದವರು ಕೇಳಿ ನೋಡಿ. ನನ್ನನ್ನು ʼಗೊತ್ತಿಲ್ಲ ಸಚಿವರುʼ ಎಂದು ಟ್ರೋಲ್ ಮಾಡುವವರಿಗೆ ‘ಚಾಟ್ ಜಿಪಿಟಿ ನೋಡೋಕೆ ಹೇಳಿ, ಪರಮೇಶ್ವರ್ ರ ಸ್ಥಾನ ಎಲ್ಲಿದೆ ಎಂದು ಗೊತ್ತಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ʼಗೊತ್ತಿಲ್ಲ ಸಚಿವರುʼ ಎಂದು ಟ್ರೆಂಡ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಹೇಳ್ಕೊಳ್ಳಿ ಬಿಡ್ರಿ. ಈ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ಗೃಹ ಸಚಿವರು ಇರುವುದು ಈ ಜಿ. ಪರಮೇಶ್ವರ್. ಅವರಿಗೆ ಚಾಟ್ ಜಿಪಿಟಿ ನೋಡೋಕೆ ಹೇಳಿ. ನೀವು ಪ್ರಶ್ನೆ ಕೇಳ್ತಿರಾ, ಆದ್ರೆ ಎಲ್ಲದಕ್ಕೂ ನಾವು ಉತ್ತರ ಕೊಡೋದಕ್ಕೆ ಆಗುತ್ತಾ? ನಾನು ಗೃಹ ಸಚಿವನಾಗಿ ಕೊಡುವಂತಹ ಹೇಳಿಕೆ ಬಹಳ ಜವಾಬ್ದಾರಿಯುತವಾಗಿರಬೇಕು. ಗೊತ್ತಿಲ್ಲದಿರುವುದನ್ನೆಲ್ಲ ಹೇಳುವುದಕ್ಕೆ ಆಗುವುದಿಲ್ಲ. ಸ್ವಾಭಾವಿಕವಾಗಿ ಗೊತ್ತಿಲ್ಲ ಎಂದು ಹೇಳಿರುತ್ತೇನೆ’ ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಪ್ರಶ್ನೆಯ ಬಗ್ಗೆ ಕೇಳಿದಾಗ, ʼಅವರ ಹೇಳಿಕೆಗೆ ನಾನು ಉತ್ತರ ನೀಡಲು ಆಗಲ್ಲ. ಕೆ.ಎನ್.ರಾಜಣ್ಣ ಜವಾಬ್ದಾರಿಯುತ ಸಚಿವರಾಗಿದ್ದವರು. ರಾಜಣ್ಣ ಹೇಳಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಷಡ್ಯಂತ್ರ ರೂಪಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲʼ ಎಂದರು.
ಅದೇ ಸಂದರ್ಭದಲ್ಲಿ ಅವರು ಧರ್ಮಸ್ಥಳ ಚಲೋ ಬಗ್ಗೆ ಮಾತನಾಡಿ, ʼಬಿಜೆಪಿಗರು ಶ್ರೀ ಮಂಜುನಾಥನ ಆಶೀರ್ವಾದಕ್ಕೆ ಹೋಗುತ್ತಿದ್ದಾರೆ. ಮಂಜುನಾಥನ ಆಶೀರ್ವಾದ ಪಡಕೊಂಡು ಬರಲಿ. ನಾವು ಧರ್ಮಸ್ಥಳಕ್ಕೆ ಅನೇಕ ಸಂದರ್ಭದಲ್ಲಿ ಹೋಗಿದ್ದೇನೆ. ಮುಂದೆಯೂ ಕೂಡ ಹೋಗುತ್ತೇನೆ. ಬಿಜೆಪಿಯವರನ್ನು ಕೇಳಿಕೊಂಡು ಯಾರಾದರೂ ದೇವಸ್ಥಾನಕ್ಕೆ ಹೋಗ್ತಾರಾ?ʼ ಎಂದು ಅವರು ಪ್ರಶ್ನಿಸಿದರು.
Comments are closed.