ಎಡಮಂಗಲ ಕೋವಿಡ್ ಟೆಸ್ಟ್ ಗೆ ವಿರೋಧ: ಪೋಲೀಸರ ಅಸಹಕಾರ: ಕಾರ್ಯಪಡೆ ನೋಡಲ್ ಅಧಿಕಾರಿ ಆರೋಪ

ಕಡಬ : ಎಡಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿಯೊಂದರ ವ್ಯಕ್ತಿಗೆ ಕೊರೊನ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಭಾನುವಾರ ಆ ಕಾಲೋನಿಯ ಜನರ ಕೋವಿಡ್ ಟೆಸ್ಟ್ ಗೆ ಹೋದ ಆರೋಗ್ಯ ಇಲಾಖಾಧಿಕಾರಿಗಳನ್ನೊಳಗೊಂಡ ಕೋವಿಡ್ ಕಾರ್ಯಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಇದಕ್ಕೆ ಪೋಲೀಸರ ಸಹಕಾರ ಕೋರಿದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಕಾರ್ಯಪಡೆ ಮುಖ್ಯಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಶನಿವಾರ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಪೀಡಿತ ಗ್ರಾ. ಪಂ.ಸದಸ್ಯರು ವಾಸಿಸುವ ಇಲ್ಲಿನ ಸರಕಾರಿ ಶಾಲಾ ಬಳಿಯ ಕಾಲೋನಿಗೆ ಇಲ್ಲಿನ ಕೊರೊನಾ ಕಾರ್ಯಕಡೆಯ ನೋಡೆಲ್ ಅಧಿಕಾರಿ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ನೇತೃತ್ವದ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗಳ ತಂಡ ಭೇಟಿ ನೀಡಿ ಕೋವಿಡ್ ಪರೀಕ್ಷೆಗೆ ಮುಂದಾದಾಗ ಕಾಲೋನಿ ಬಹುತೇಕ ಜನತೆ ತೀವೃ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವುದಾಗಿ ಬೆದರಿಸಿದ್ದಾರೆ. ಇದರಿಂದಾಗಿ ಕೆಲವು ಜನರ ಕೋವಿಡ್ ಪರೀಕ್ಷೆ ನಡೆಸಲು ಸಾಧ್ಯವಾಯಿತು. ಹೆಚ್ಚಿನ ಜನ ಅಸಹಕಾರ ನೀಡಿದ್ದಾರೆ. ಇದರಿಂದ ಕಂಗಾಲಾದ ಕೋವಿಡ್ ಪಡೆ ಕಾರ್ಯಾಚರಣೆಯಿಂದ ವಾಪಾಸ್ಸಾಗಿದೆ.

ಇಂತಹ ಸಂದರ್ಭದಲ್ಲಿ ಕಾರ್ಯಪಡೆಯೊಂದಿಗೆ ಪೋಲೀಸ್ ಸಿಬ್ಬಂದಿ ಇರಲಿಲ್ಲ. ಮಾತ್ರವಲ್ಲ ಒಬ್ಬ ಪೋಲೀಸ್ ಕೊಟ್ಟು ಸಹಕರಿಸಿ ಎಂದು ಆರೋಪಿಸಿರುವ ನೋಡೆಲ್ ಅಧಿಕಾರಿ ಸಜಿಕುಮಾರ್ ಸಂಬಂಧಪಟ್ಟ ಪೋಲೀಸ್ ಠಾಣಾಧಿಕಾರಿಯವರಿಗೆ ಮನವಿ ಮಾಡಿದರೆ ನಮ್ಮಲ್ಲಿ ಸಿಬ್ಬಂದಿಯಿಲ್ಲ, ನೀವು ಎರಡು ಮೂರು ದಿನಗಳ ಮುಂಚೆ ನಮಗೆ ಮನವಿ ಮಾಡಿದರೆ ಸಿಬ್ಬಂದಿ ನೀಡಬಹುದು ಎಂದು ಸಬೂಬೂ ನೀಡಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಸಜಿಕುಮಾರ್ ಪುತ್ತೂರು ಎಎಸ್‍ಪಿ ಯವರಿಗೆ ದೂರವಾಣಿ ಕರೆ ಮಾಡಿದಾಗಲೂ ಅಸಹಕಾರ ದೊರೆತಿದೆ ಎಂದು ಅವರು ದೂರಿದ್ದಾರೆ.

ನನಗೆ ನಾಲ್ಕು ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಕಾರ್ಯಪಡೆಯ ನೋಡೆಲ್ ಅಧಿಕಾರಿ ಜವಾಬ್ದಾರಿ ಇದೆ, ನಾವು ನಮ್ಮ ಮೆಸ್ಕಾಂ ಇಲಾಖೆಯ ಜವಾಬ್ದಾರಿಯೊಂದಿಗೆ ಕೋವಿಡ್ ಕಾರ್ಯಪಡೆಯ ಕಾರ್ಯವನ್ನು ಮಾಡುತ್ತಿದ್ದೇವೆ, ಆದರೆ ನಮಗೆ ಒಂದೇ ಒಂದು ಪೋಲೀಸ್ ಭದ್ರತೆ ಇಲ್ಲ. ಕೋವಿಡ್ ಕಾರ್ಯಪಡೆಯಲ್ಲಿ ಪೋಲೀಸ್ ಸಿಬ್ಬಂದಿ ಕೂಡಾ ಒಬ್ಬರು ಸದಸ್ಯರಾಗಿರುತ್ತಾರೆ. ಆದರೆ ಎಡಮಂಗಲ ಗ್ರಾ.ಪಂ ವ್ಯಾಪ್ತಿಯ ಕಾರ್ಯಪಡೆಯಲ್ಲಿನ ಪೋಲೀಸ್ ಸಿಬ್ಬಂದಿ ಈವರಗೆ ನಡೆದ ಕೋವಿಡ್ ಕಾರ್ಯಪಡೆಯ ಸಭೆಗೆ ಆಗಮಿಸಿಲ್ಲ. ಇತ್ತೀಚೆಗೆ ಸಚಿವ ಅಂಗಾರ ಅವರು ಇಲ್ಲಿಗೆ ಆಗಮಿಸುವಾಗ ಕೂಡಾ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಈ ಬಗ್ಗೆ ಪೋಲಿಸ್ ಅಧಿಕಾರಿಗಳಲ್ಲಿ ವಿಷಯ ತಿಳಿಸಿದರೆ ಉಢಾಫೆ ಉತ್ತರ ನೀಡುತ್ತಾರೆ. ನಾವು ನೋಡುತ್ತೇವೆ ಎನ್ನುವ ಮಾತು ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್ ನಿರ್ಮೂಲನೆಗೆ ಅಗತ್ಯವಾದರೆ ಪೋಲೀಸ್ ಬಳಸಿಕೊಳ್ಳಬಹುದು ಎಂದು ಸಚಿವ ಅಂಗಾರ ಕೋವಿಡ್ ಕಾರ್ಯಪಡೆಯಲ್ಲಿ ತಿಳಸಿದ್ದಾರೆ. ಆದರೆ ಪೊಲೀಸರು ಮಾತ್ರ ಅಸಹಕಾರ ತೋರಿದ್ದಾರೆ ಎಂದು ಸಜಿಕುಮಾರ್ ಆರೋಪಿಸಿದ್ದಾರೆ.

Leave A Reply

Your email address will not be published.