ಕೋವಿಡ್ ನಿಯಮಾವಳಿಗಳ ಸಡಿಲಿಕೆ ಸಾಧ್ಯವಿಲ್ಲ -ಕೇಂದ್ರ ಸರಕಾರ

ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು ಆದರೇ, ಕೋವಿಡ್ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲವಾದ್ದರಿಂದ ಸಂಪೂರ್ಣವಾಗಿ ನಿಯಮಗಳನ್ನು ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜೂನ್ 23 ರಿಂದ 29ರ ನಡುವೆ ದೇಶದ ಸುಮಾರು 71 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ರೇಟ್ ಶೇಕಡಾ 10 ಕ್ಕಿಂತ ಹೆಚ್ಚು ವರದಿಯಾಗಿದೆ. ಹಾಗಾಗಿ ಸೋಂಕನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಿಯಮಗಳು ಸ್ವಲ್ಪ ಸಡಿಲಿಕೆಯಾಗಿವೆ ಎಂದ ಮಾತ್ರಕ್ಕೆ ಸೋಂಕು ಮುಗಿದಿದೆ ಎಂದರ್ಥವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನೂ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ.

ಸರ್ಕಾರಗಳು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಕೋವಿಡ್ ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಸೋಂಕಿನ ಪ್ರಮಾಣ ಹೆಚ್ಚಾಗದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ.

ಜೂನ್‌ 21ರಿಂದ ಪ್ರತಿ ದಿನ ಸರಾಸರಿ 50 ಲಕ್ಷ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. ಇದುವರೆಗೆ ಒಟ್ಟು 34 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ವಿವರ ನೀಡಿದೆ. ಲಸಿಕೆಯೊಂದೇ ಕೋವಿಡ್ ಸೋಂಕನ್ನು ಓಡಿಸಲು ಇರುವ ಒಂದೇ ಅಸ್ತ್ರ. ಎಲ್ಲಾ ನಾಗರಿಕರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ದೇಶದಿಂದ ಸೋಂಕನ್ನು ಓಡಿಸುವಲ್ಲಿ ಸಹಾಯ ಮಾಡಬೇಕು ಎಂದು ಹೇಳಿದೆ.

Leave A Reply

Your email address will not be published.