ಬಾವಿಗೆ ಬಿದ್ದು ಪೂರ್ತಿ ಮುಳುಗಿ ಮುಖವಷ್ಟೇ ಇಣುಕುತ್ತಿರುವ ಚಿರತೆಯ ವಿಶೇಷ ಫೋಟೋ ವೈರಲ್ | ಚಿರತೆಯ ರಕ್ಷಿಸಿದ ಸಿಬ್ಬಂದಿ !
ಚಿರತೆಯೊಂದು ಮೈಮರೆವಿನಲ್ಲಿ ಬಾವಿಗೆ ಬಿದ್ದು, ನೀರಿನಿಂದ ಅದರ ತಲೆ ಮಾತ್ರ ಇಣುಕಿ ನೋಡುತ್ತಿರುವ ಅಪರೂಪದ ಫೋಟೋ ಯಾರದೋ ಕ್ಯಾಮರಾದಲ್ಲಿ ಸೆರೆ ಸಕ್ಕು ವೈರಲ್ ಆಗುತ್ತಿದೆ.
ಆಸ್ಸಾಂನ ಕಮರೂಪ್ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮಸ್ಥರೊಬ್ಬರಿಗೆ ಚಿರತೆಯು ಕರ್ಕಶವಾಗಿ ಘರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು. ಅದು ತೆರೆದ ಬಾವಿಯಾಗಿದ್ದರಿಂದ ಅಲೆದಾಡುತ್ತಿದ್ದ ಚಿರತೆಯು ಹೇಗೋ ಬಾವಿಗೆ ಬಿದ್ದಿದೆ ಎಂದು ನಂತರ ತಿಳಿಯಿತು.
ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿದ್ದು, ಬಲೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಕರು ರಕ್ಷಿಸಿ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ವನ್ಯಜೀವಿಯನ್ನು ಸಂರಕ್ಷಿಸಿದ್ದಕ್ಕಾಗಿ ಅರಣ್ಯ ಸಿಬ್ಬಂದಿಗಳು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿದ್ದಾರೆ ಅಭಿನಂದನೆಗಳು ಎಂಬ ಶ್ಲಾಘನೆ ವ್ಯಕ್ತವಾಗಿದೆ. ಇನ್ನೋರ್ವರು ಬಾವಿಯಲ್ಲಿ ಕುತ್ತಿಗೆಯನ್ನಷ್ಟೇ ಮೇಲಕ್ಕೆತ್ತಿ ಕಣ್ಣು ಮಿಟುಕಿಸುತ್ತಿರುವ ಚಿರತೆಯ ಚಿತ್ರ ಅದ್ಭುತವಾಗಿದೆ, ಅಪರೂಪದ ದೃಶ್ಯ ಎಂದು ಅಭಿಪ್ರಾಯ ಹೇಳಿದ್ದಾರೆ.
ಒಂದೆಡೆ ಅಧಿಕಾರಿಗಳ ಸಮಯಪ್ರಜ್ಞೆಯ ಕುರಿತು ಶ್ಲಾಘನೆ ವ್ಯಕ್ತವಾಗುವುದು ತೋರುತ್ತಿದ್ದರೆ ಇನ್ನೊಂದೆಡೆಯಲ್ಲಿ ಚಿರತೆಯ ಅಪರೂಪದ ದೃಶ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.