ದಕ್ಷಿಣಕನ್ನಡ , ಉಡುಪಿಯಾದ್ಯಂತ ನಿರಂತರ ವರ್ಷ ಧಾರೆ | ತುಂಬಿಕೊಳ್ಳುತ್ತಿರುವ ನದಿ-ಕೊಳ್ಳಗಳು, ಅಲ್ಲಲ್ಲಿ ಕೃಷಿ ಹಾನಿ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಲಲ ಜಲಲ ಜಲಧಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ದೊಡ್ಡ ಮಳೆ ಒಂದು ಚಿಕ್ಕ ಸಮಯದೊಳಗೆ ಬಡಿದು ಹೋಗುತ್ತಿದೆ. ಗಂಟೆಗೊಮ್ಮೆ ಇನ್ಸ್ಟಾಲ್ ಮೆಂಟಿನಲ್ಲಿ ಬರುತ್ತಿರುವ ಈ ಮಳೆ ಮೊನ್ನೆ ಪರಿಸರ ದಿನಾಚರಣೆ ಆಚರಿಸಿಕೊಂಡ ಭೂಮಿಯನ್ನು ಮತ್ತಷ್ಟು ತಂಪಾಗಿಸಿದೆ.
ಮಂಗಳೂರಲ್ಲಿ ನಿರಂತರ ವರ್ಷಧಾರೆಗೆ ಕೆರೆಯಂತಾಗಿವೆ ರಸ್ತೆಗಳು. ಹೆಚ್ಚಿನ ನದಿಗಳ ನದಿ ನೀರಿನ ಮಟ್ಟದಲ್ಲೂ ಏರಿಕೆ ಕಂಡು ಬಂದಿದೆ. ಸೋಮವಾರ ಬೆಳಗ್ಗಿನಿಂದಲೇ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕೂಡ ನಿರಂತರ ಮಳೆ ಪರಿಣಾಮ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕರಾವಳಿಯ ಹಲವಾರು ಕಡೆಗಳಲ್ಲಿ ಅಡಿಕೆ ಮರ ಮುರಿದು ಬಿದ್ದಿವೆ. ರಬ್ಬರ್ ಮರ ನೆಲಕ್ಕುರುಳಿವೆ.
ಇನ್ನು, ಮಂಗಳೂರು ನಗರದ ಅಲ್ಲಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೇ ರಸ್ತೆ ತುಂಬಿಕೊಂಡಿದೆ.
ಜೂನ್ 16ರವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 115 ರಿಂದ 204 ಮಿ.ಮೀ. ವರೆಗೆ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ಜೂನ್ 18ರ ಬಳಿಕ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಹಲವೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಜೂನ್ 18 ರವರೆಗೆ ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ.
ಜೂನ್ 16 ಮತ್ತು 17 ರಂದು ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಹಾಗಾಗಿ, ಆರೆಂಜ್ ಅಲರ್ಟ್ ಮುಂದುವರೆಸಲಾಗಿದೆ.
ಮುಂದಿನ ಎರಡು ದಿನಗಳ ಕಾಲ ವಿಜಯಪುರ, ಯಾದಗಿರಿ, ಬಳ್ಳಾರಿ, ರಾಯಚೂರು, ಕಲ್ಬುರ್ಗಿ, ಹಾವೇರಿ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.ಕರಾವಳಿಯಲ್ಲಿ ಭಾರಿ ಮಳೆ,ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಕೇರಳದ ಕೊಳಿಕೋಡ್, ವಯನಾಡಿನಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಇಂದು ಅಧಿಕ ಮಳೆಯಾಗಲಿದೆ.