ಚಿಂದಿ ಆಯುವ ಬೆಂಗಳೂರಿನ ಆ ಹುಡುಗರ ಬ್ಯಾಗಿನಲ್ಲಿತ್ತು 90 ಲಕ್ಷ ಗರಿ ಗರಿ ನೋಟುಗಳು
ಬೆಂಗಳೂರು, ಜೂ. 08: ಅವರು ಚಿಂದಿ ಆಯುವ ಯುವಕರು. ಒಂದು ತರ ಬೆಗ್ಗರ್ ಥರದ ಜೀವನ ನಡೆಸುತ್ತಿದ್ದವರು. ಅಂತವರು ಬರೋಬ್ಬರಿ 40 ಸಾವಿರ ಬಾಡಿಗೆ ಕೊಟ್ಟು ಕಾರಿನಲ್ಲಿ ಕೋಲ್ಕತಾಗೆ ಪ್ರಯಾಣ ಬೆಳೆಸಿದ್ದರು. ಚಿತ್ತೂರಿನ ಲಾಕ್ ಡೌನ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅವರ ಕಾರು ತಡಕಾಡಿದಾಗ ಚಿಂದಿ ಆಯುವವರ ಬಳಿ ಸಿಕ್ಕಿದ್ದು ಬರೋಬ್ಬರಿ 90 ಲಕ್ಷ ರೂಪಾಯಿಗಳ ಇಸ್ತ್ರಿ ಹಾಕಿ ಇಟ್ಟಂತಹ ಗರಿಗರಿ ನೋಟು !
ಮೂಲತಃ ಬಾಂಗ್ಲಾದೇಶಿಯರು. ಬೆಂಗಳೂರಿಗೆ ಬಂದಿದ್ದ ಇವರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಪೀಣ್ಯ ಸಮೀಪದ ಬಾಗಲಗುಂಟೆ ಅಕ್ಕ ಪಕ್ಕದಲ್ಲಿ ಚಿಂದಿ ಆಯುವ ಮೂಲಕ ದಿನಕ್ಕೆ ಐದು ನೂರು ರೂಪಾಯಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಳ್ಳತನ ಮಾಡಿ ಶ್ರೀಮಂತರಾಗುವ ಕನಸು ಕಂಡರು. ಲಾಕ್ ಡೌನ್ ಸಮಯದಲ್ಲಿ ಯಾರೂ ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿದರು. ಅಂದುಕೊಂಡಂತೆ ಬಾಗಲಗುಂಟೆಯ ಎಂಎಚ್ಎಆರ್ ಬಡಾವಣೆಯ ಮನೆಯೊಂದಕ್ಕೆ ಕನ್ನ ಹಾಕಿದ್ದರು. ಮೊದಲ ಪ್ರಯತ್ನದಲ್ಲಿಯೇ ಬಂಪರ್ ಲಾಟರಿ ಹೊಡೆಯುತ್ತದೆ ಎಂದು ಅವರು ಅಂದುಕೊಂಡೇ ಇರಲಿಲ್ಲ. ಆ ಮನೆಯೊಂದರಲ್ಲಿಯೇ ಅವರಿಗೆ ಒಂದು ಕೋಟಿ ಹಣ ಸಿಕ್ಕಿತ್ತು.
ಚಿಂತಾಮಣಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದ.
ಇದನ್ನು ಗಮನಿಸಿದ್ದ ಚಿಂದಿ ಆಯುವರು ಮನೆ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಶುಲ್ಕ ಪಾವತಿಸಲೆಂದು ವೈದ್ಯ ವಿದ್ಯಾರ್ಥಿ ಇಟ್ಟಿದ್ದ 90 ಲಕ್ಷ ರೂ. ಹಣವನ್ನು ಎಗರಿಸಿದ್ದಾರೆ.
ಅಂದು ಮನೆಯ ಬೀಗ ಮುರಿದಿದ್ದನ್ನು ಗಮನಿಸಿದ ಪಕ್ಕದ ಮನೆಯವರು ವೈದ್ಯ ವಿದ್ಯಾರ್ಥಿಯ ತಾತ ಈರಪ್ಪ ಅವರಿಗೆ ವಿಚಾರ ತಿಳಿಸಿದ್ದರು. ಬಾಗಲಗುಂಟೆ ಸಿದ್ದೇನಹಳ್ಳಿಯ ಮನೆಗೆ ಬಂದು ನೋಡಿದಾಗ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕೆಂದು ತಂದಿಟ್ಟಿದ್ದ ಹಣ ಇರಲಿಲ್ಲ. ಗಾಬರಿಗೊಂಡು ಕೂಡಲೇ ಸಮೀಪದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಪ್ರಯತ್ನಿಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಚಿಂದಿ ಆಯುವವರು 40 ಸಾವಿರ ರೂ. ಬಾಡಿಗೆ ನೀಡಿ ಕಾರು ಪಡೆದಿದ್ದರು.
ಕಳ್ಳತನ ಮಾಡಿದ ನಂತರ ಅವರು ಹೊಸಕೋಟೆಗೆ ನಡೆದುಕೊಂಡೇ ಸಾಗಿದ್ದಾರೆ. ವಾಹನದಲ್ಲಿ ಹೋದರೆ ಪೊಲೀಸರು ಹಿಡಿದು ಬಿಡುತ್ತಾರೆ ಎಂದು ಪೀಣ್ಯಾ ದಿಂದ ಹೊಸಕೋಟೆವರೆಗೂ ಅವರು ನಡೆದುಕೊಂಡೇ ಹೋಗಿದ್ದಾರೆ. ಬೆನ್ನ ಮೇಲೆ ದೊಡ್ಡ ದುಡ್ಡಿನ ನೋಟಿನ ಕಂತೆಗಳ ಬ್ಯಾಗ್ ಇತ್ತು. ಆದರೆ ಅವರ ಗೆಟ್ ಅಪ್ ಚಿಂದಿ ಆಯುವ ಹುಡುಗರ ಥರ ಇತ್ತು. ಯಾವುದೋ ತೇಪೆ ಹಾಕಿ ಬಿಸಾಡಿದ್ದ ಗುಜರಿಯಲ್ಲಿ ಸಿಕ್ಕ ಬ್ಯಾಗಿನಲ್ಲಿ ಹಣ ತುಂಬಿಕೊಂಡು ಹೋದರೆ ಯಾವ ಪೋಲೀಸರಿಗೆ ತಾನೇ ಅನುಮಾನ ಮೂಡುತ್ತದೆ. ಹಾಗೆ ಅವರು ಸುಲಭವಾಗಿ ಹೊಸಕೋಟೆ ತಲುಪಿಕೊಂಡಿದ್ದರು.
ಅಲ್ಲಿಂದ ಆಂಧ್ರ ಪ್ರದೇಶದ ಮೂಲಕ ಪಶ್ಚಿಮ ಬಂಗಾಳ ತಲುಪಲು ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ಹೊಸಕೋಟೆಯಿಂದ 40 ಸಾವಿರ ರೂ. ಬಾಡಿಗೆಗೆ ಕಾರು ಗೊತ್ತು ಮಾಡಿಕೊಂಡಿದ್ದಾರೆ. ಅವರು ಬಾಡಿಗೆ ಕಾರಿನಲ್ಲಿಯೇ ಕರ್ನಾಟಕ ಗಡಿ ದಾಟಿ ಮುಳಬಾಗಿಲು ಮೂಲಕ ಚಿತ್ತೂರು ತಲುಪಿದ್ದಾರೆ.
ಚಿತ್ತೂರಿನಲ್ಲಿ ಕಿತ್ತು ಬಿದ್ದ ಅದೃಷ್ಟ !
ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರು ಸಾಗುತ್ತಿದ್ದ ಕಾರನ್ನು ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದೊಂದು ಸಾಮಾನ್ಯ ಪರಿಶೀಲನೆಯಾಗಿತ್ತು ಅಷ್ಟೇ. ಆದ್ರೆ ಚಿಂದಿ ಆಯುವವರ ಅದೃಷ್ಟ ಕೈಕೊಟ್ಟಿತ್ತು. ತಪಾಸಣೆಯ ವೇಳೆ ಚಿಂದಿ ಆಯುವರ ಬಳಿಯಿದ್ದ 90 ಲಕ್ಷ ರೂ. ನಗದು ಹಣ ಪತ್ತೆಯಾಗಿದೆ. ಪೊಲೀಸರು ಅಲ್ಲೇ ಅವರನ್ನು ಲಾಕ್ ಮಾಡಿದ್ದಾರೆ. ವಿಚಾರಣೆ ನಡೆಸಿದಾಗ ವೈದ್ಯ ವಿದ್ಯಾರ್ಥಿಯ ಮನೆ ಬಾಗಿಲು ಮುರಿದು ಕಳ್ಳತನ ಪ್ರಕರಣ ಬಯಲಾಗಿದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದ ಆಂಧ್ರ ಪೊಲೀಸರು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಆಂಧ್ರ ಪೊಲೀಸರ ಮಾಹಿತಿ ಮೇರೆಗೆ ಬಾಂಗ್ಲಾ ಮೂಲದ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿ ಅಷ್ಟೂ ಹಣವನ್ನು ಸಂಗ್ರಹಿಸಿದ್ದಾರೆ.
90 ಲಕ್ಷದಲ್ಲಿ ಅವರು ಮಾಡಿದ್ದು ಬರೀ 1600 ರೂ. ವೆಚ್ಚ !!
90 ಲಕ್ಷ ರೂ. ಕದ್ದರೂ ಚಿಂದಿ ಆಯುವವರಿಗೆ ಅದನ್ನು ಯಾವ ರೀತಿ ಖರ್ಚು ಮಾಡಬೇಕು ಎಂಬುದು ಗೊತ್ತಾಗಿಲ್ಲ. ಅವರು ಕದ್ದು 2 ದಿನವಾಗಿತ್ತು. ಅಷ್ಟರಲ್ಲಿ ಅವರು ಬರೀ 1600 ರೂ. ವೆಚ್ಚ ಮಾಡಿ ಉಳಿದ ಹಣವನ್ನು ಹಾಗೇ ಇಟ್ಟುಕೊಂಡಿದ್ದರು. ಅದೂ ತಮ್ಮ ದಾರಿಮಧ್ಯೆ ಊಟ-ತಿಂಡಿ ಮತ್ತಿತರ ಸಣ್ಣಪುಟ್ಟ ವೈಯಕ್ತಿಕ ಅಗತ್ಯಗಳಿಗಾಗಿ ಖರ್ಚು ಮಾಡಿದ್ದರು. ಇದೀಗ ಅಷ್ಟೂ ಹಣವನ್ನು ಬಾಗಲಗುಂಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತ 90 ಲಕ್ಷ ಕೈ ತಪ್ಪಿ ಜೀವವೇ ಕಳೆದುಕೊಂಡಂತಾಗಿದ್ದ ವೈದ್ಯ ವಿದ್ಯಾರ್ಥಿ ಮರು ಜೀವ ಪಡೆದಂತಾಗಿದೆ.
ಇನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಿರುವ ಬಗ್ಗೆ ಸಂಜೀವ್ ಹಾಗೂ ಶಿಭಂಕರ್ ನನ್ನು ಬಾಗಲಗುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ನಾತಕೋತ್ತರ ವೈದ್ಯಕೀಯ ಪದವಿಗಾಗಿ ಸಂಗ್ರಹಿಸಿಟ್ಟಿದ್ದ, ಅವರ ಜೀವಮಾನದ ದುಡಿಮೆಯಾಗಿದ್ದ ದುಡ್ಡು ಮರಳಿ ಸಿಕ್ಕಿ ಬಗ್ಗೆ ವೈದ್ಯ ವಿದ್ಯಾರ್ಥಿ ಕುಟುಂಬ ಸಂತಸದಲ್ಲಿ ತೇಲಾಡುತ್ತಿದೆ.