ತಲೆಮಾರುಗಳ ಹಿರಿಯ ಜೀವಗಳ ಕೈಯಲ್ಲಿ ರಾಯಲ್ ಎನ್ ಫೀಲ್ಡ್ ನಂತಿದ್ದ ಸೈಕಲ್ | ವಿಶ್ವ ಸೈಕಲ್ ದಿನದಂದು ಸೈಕಲ್ ಬಗೆಗಿನ ಅಳಿದುಳಿದ ನೆನಪುಗಳು
ಸುತ್ತಲಿನ ವಾತಾವರಣದಲ್ಲಿ ಎತ್ತ ನೋಡಿದರೂ ವಿಧ ವಿಧವಾದ, ನವ ನವೀನ ಶೈಲಿಯ ಮೋಟಾರ್ ವಾಹನಗಳು. ಈ ವಾಹನದಿಂದ ಬರುವ ಹೊಗೆಯಿಂದಾಗಿ ನಮ್ಮ ಸ್ವಚ್ಛ ಪರಿಸರ ವಿಷಮಯವಾಗುತ್ತಿರುವುದು ಸತ್ಯ.ಮೋಟಾರ್ ವಾಹನಗಳು ಮಾರುಕಟ್ಟೆಗೆ ಬಂದ ಬಳಿಕದ ಕಾಲಘಟ್ಟದಲ್ಲಿ ಸೈಕಲ್ ಗಳ ಬಳಕೆ ತೀರಾ ಕಡಿಮೆಯಾಗಿ ಮೂಲೆ ಸೇರಿದೆ. ಅಂದ ಹಾಗೇ ನಿಮಗೆಲ್ಲರಿಗೂ ವಿಶ್ವ ಸೈಕಲ್ ದಿನದ ಶುಭಾಶಯಗಳು. ಇತ್ತೀಚಿಗೆ ಬಳಕೆಯಲ್ಲಿ ಕೊಂಚ ಹಿಂದೆ ಇದ್ದರೂ ಹಿಂದೊಂದು ಸಮಯದಲ್ಲಿ ರಾಯಲ್ ಎಂಫಿಎಲ್ಡ್ ನಂತೆ ಪ್ರಸಿದ್ದಿ ಪಡೆದ ಸೈಕಲ್ ನ ಬಗೆಗೆ ನಿಮಗೆಷ್ಟು ಗೊತ್ತು.?
ನಮ್ಮ ಸಂಪ್ರದಾಯದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಒಂದಲ್ಲಾ ಒಂದು ಹಬ್ಬ ಹರಿದಿನಗಳೇ. ಆಚರಿಸುತ್ತಾ ಬಂದರೇ ವರ್ಷವಿಡೀ ಸಂಭ್ರಮ ಸಂತೋಷದಿಂದ ಹಬ್ಬದ ವಾತಾವರಣವೇ. ಅದೇ ರೀತಿ ಪಾಶ್ಚಿಮಾತ್ಯರೂ ಸಹಾ ವರ್ಷದ ಪ್ರತೀ ದಿನವನ್ನು ಒಬ್ಬೊಬ್ಬರಿಗೆ ಇಲ್ಲವೇ ಒಂದೊಂದಕ್ಕೆ ಮೀಸಲಿಟ್ಟು ಸಂಭ್ರಮದಿಂದ ಅದನ್ನು ಆಚರಿಸುತ್ತಾ ಬರುತ್ತಿದ್ದಾರೆ. ಅವರ ಅಂತಹ ಬಹುತೇಕ ದಿನಗಳನ್ನು ಆಚರಿಸಲು ಮನಸ್ಸು ಒಪ್ಪದಿದ್ದರೂ ಜೂನ್ 3 ರಂದು ವಿಶ್ವ ಸೈಕಲ್ ದಿನಾಚರಣೆಯನ್ನು ಆಚರಿವುದಕ್ಕೆ ಮಾತ್ರ ಸಂತೋಷ ಪಡುತ್ತೇವೆ.
ಯಂತ್ರಗಳ ವಿಷಯದಲ್ಲಿ ಬದುಕಿನ ಮೊದಲ ಆಕರ್ಷಣೆಯೆಂದರೆ ಅದು ಸೈಕಲ್. ಸೈಕಲ್ ಅನ್ನು ಒಂದು ದೊಡ್ಡ ಆಸೆಯಂತೆ, ಆರಾಧನಾ ಭಾವದಿಂದ ಅದನ್ನು ಪಡೆಯಲು ಕಾದು ಕೂತಿದ್ದ ದಿನಗಳಿಂದ ಹಿಡಿದು ಈಗ ಯಾಂತ್ರಿಕ ಜಗತ್ತು ಬಹುದೂರ ಕ್ರಮಿಸಿದೆ. ಆದರೂ ಪ್ರತಿಯೊಬ್ಬರ ಬಾಲ್ಯದಲ್ಲಿ ಅದರೆಡೆಗಿನ ಆಕರ್ಷಣೆ ಇನಿತೂ ಕಮ್ಮಿ ಆಗಿಲ್ಲ.
ಚಿಕ್ಕ ವಯಸ್ಸಿನಿಂದ ಹಿಡಿದು ಎಲ್ಲಾ ವಯೋಮಾನದವರೆಗೂ ಬಳಸಬಹುದಾದಂಥ ಏಕೈಕ ಸಾಧನ. ವ್ಯಾಯಾಮಗಳಲ್ಲಿ ದೇಹದ ಎಲ್ಲಾ ಸ್ನಾಯುಗಳಿಗೆ ಕಸುವು ನೀಡುವ ಕೆಲವು ಸರಳ ವ್ಯಾಯಾಮಗಳೆಂದರೆ ನಡಿಗೆ ಮತ್ತು ಸೈಕ್ಲಿಂಗ್.
ದಿನವಿಡೀ ಚಟುವಟಿಕೆಯಿಂದಿರಿಸಲು ಸೈಕ್ಲಿಂಗ್ ಅತ್ಯುತ್ತಮವಾದ ವ್ಯಾಯಾಮವಾಗಿದೆ. ದೇಹದಾರ್ಢ್ಯತೆ ಕಾಪಾಡಲು, ಆರೋಗ್ಯಕರ ಜೀವನಕ್ರಮ ಪಡೆಯಲು ಹಾಗೂ ವಿಶೇಷವಾಗಿ ಮಾನಸಿಕ ಮತ್ತು ದೈಹಿಕವಾಗಿ ಚೈತನ್ಯಶೀಲರಾಗಿರಲು ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದೆ.
ಇದು ಮಾನಸಿಕ ಒತ್ತಡ, ಖಿನ್ನತೆ ಅಥವಾ ಉದ್ವೇಗ ಮೊದಲಾದ ಮನಸ್ಸಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವುದರೊಂದಿಗೆ ಕ್ಯಾನ್ಸರ್ ನಂತಹ ರೋಗಗಳನ್ನು ನೀವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಂತೂ ಒಂದು ಕಾಲದಲ್ಲಿ ರಾಜಾರೋಷವಾಗಿ ರಾಜನಂತಿದ್ದ ಸೈಕಲ್ ಇಂದಿನ ಯುವ ಪೀಳಿಗೆಯಲ್ಲಿ ಮೂಲೆಗುಂಪು ಸೇರುತ್ತಿದೆ ಎಂದಾಗ ಹಿಂದಿನ ತಲೆಮಾರುಗಳ ಹಳೇ ಜೀವಗಳು ಸೈಕಲ್ ನ ಜೊತೆಗಿನ ಅವಿನಾಭಾವ ನಂಟನ್ನು ಇಂದಿಗೂ ನೆನಪಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಹೊಸ ಜೀವಗಳು ಕೂಡಾ ಹಳೆಯ ಈ ಗಾಡಿಯತ್ತ ಮನಸ್ಸು ಹೊರಲಿಸುತ್ತಿವೆ. ಬನ್ನಿ ಸೈಕಲನ್ನು ನಮ್ಮ ಬದುಕಿನ ಭಾಗವನ್ನಾಗಿಸೋಣ, ಅದರೊಂದಿಗೆ ಇನ್ನೊಂದಷ್ಟು ವರ್ಷ ಆಯುಸ್ಸನ್ನು ಜತೆಗೂಡಿ ಅನುಭವಿಸೋಣ !