ಚಿಕನ್ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ ಎಂದು ಮಂತ್ರಿಗಳಿಗೆ ದೂರು ಸಲ್ಲಿಸಿದ ಭೂಪ

ಜೊಮ್ಯಾಟೋದ ಮೂಲಕ ಚಿಕನ್ ಬಿರಿಯಾನಿ ಪಾರ್ಸೆಲ್ ತರಿಸಿಕೊಂಡ ವ್ಯಕ್ತಿಯೊಬ್ಬ, ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲದೇ ಭಾರಿ ನಿರಾಸೆಗೆ ಒಳಗಾಗಿ, ಸಿಟ್ಟಿನಿಂದ ಸಚಿವರಿಗೆ ದೂರು ದಾಖಲು ಮಾಡಿದ್ದಾನೆ.
ಈ ಬಿರಿಯಾನಿ ಪ್ರಿಯನ ದೂರನ್ನು ನೋಡಿ ಸಚಿವರು ಸುಸ್ತಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ವಸ್ತುವಾಗಿ ವೈರಲ್ ಆಗುತ್ತಿದೆ.

ಬಿರಿಯಾನಿ ಯಾರಿಗೆ ಇಷ್ಟವಿಲ್ಲ ಹೇಳಿ. ಹೈದರಾಬಾದ್ ಎಂದ ತಕ್ಷಣ ಎಲ್ಲರಿಗೆ ಮೊದಲು ನೆನಪಾಗುವುದೇ ಅಲ್ಲಿನ ಹಬೆಯಾಡುವ ಬಿರಿಯಾನಿ. ಹೈದರಾಬಾದ್ ಬಿರಿಯಾನಿ ದೇಶದಲ್ಲಿ ಭಾರಿ ಜನಪ್ರಿಯವಾಗಿದೆ. ಹೈದರಾಬಾದಿನ ಪ್ಯಾರಡೈಸ್ ಬಿರಿಯಾನಿ ವರ್ಲ್ಡ್ ಫೇಮಸ್. ರಾಜಕಾರಣಿಗಳು, ಬಾಲಿವುಡ್, ಟೀಂ ಇಂಡಿಯಾ ಕ್ರಿಕೆಟಿಗರಿಗೂ ಹೈದರಾಬಾದ್ ಬಿರಿಯಾನಿ ಅಂದರೆ ಅಚ್ಚು ಮೆಚ್ಚು. ಇಂತಹ ಪ್ರದೇಶದಲ್ಲಿ ಬಿರಿಯಾನಿಯ ಕ್ವಾಲಿಟಿ ಮತ್ತು ಕ್ವಾಂಟಿಟಿಯಲ್ಲಿ ಹೆಚ್ಚು ಕಮ್ಮಿ ಆದರೆ ಯಾರಾದರೂ ರಾಜಿಯಾಗಲು ಸಾಧ್ಯವೆ ?

ಅಂತಹಾ ಬಿರಿಯಾನಿ ಪ್ರಿಯ ಹೈದರಾಬಾದ್‌ನ ತೋಟಕುರಿ ರಘುಪತಿ ಅನ್ನೋ ವ್ಯಕ್ತಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ತಾನು ಹೇಳಿದ ರೀತಿ ಬಿರಿಯಾನಿ ಇಲ್ಲ ಎಂದು ರೊಚ್ಚಿಗೆದ್ದ ರಘುಪತಿ ನೇರವಾಗಿ ಪುರಸಭೆ ಮತ್ತು ನಗರಾಡಳಿತ ಸಚಿವ ಕೆಟಿ ರಾಮ ರಾವ್‌ಗೆ ದೂರು ನೀಡಿದ್ದಾರೆ.

ರಘುಪತಿ ಜೋಮ್ಯಾಟೋ ಮೂಲಕ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಆರ್ಡರ್ ವೇಳೆ ಹೆಚ್ಚುವರಿ ಲೆಗ್‌ಪೀಸ್ ಹಾಗೂ ಮಸಾಲಾಗೆ ಆರ್ಡರ್ ಮಾಡಿದ್ದಾರೆ. ಆದರೆ ಜೋಮ್ಯಾಟೋ ನೀಡಿದ ಬಿರಿಯಾನಿಯಲ್ಲಿ ಹೆಚ್ಚುವರಿ ಲೆಗ್‍‌ಪೀಸ್, ಮಸಾಲ ಇರಲಿಲ್ಲ. ಕೋಪಗೊಂಡ ರಘುುಪತಿ ಟ್ವಿಟರ್ ಮೂಲಕ ಜೋಮಾಟೋಗೆ ಮತ್ತು ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ಫೋಟೋ ಸಹಿತ ದೂರು ದಾಖಲಿಸಿದ್ದಾರೆ. ಸಾಮಾನ್ಯವಾಗಿ ರಾಮರಾವ್ ಅವರು ಜನತೆಯ ಮನವಿಗೆ ಸ್ಪಂದಿಸುವ ಕಾರಣ, ಈ ರೀತಿ ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಕೊನೆಗೆ ಈಗ ನಾನೇನು ಮಾಡಬೇಕು ಹೇಳಿ ಎಂದಿದ್ದಾರೆ ರಘುಪತಿ.

ಅದನ್ನು ನೋಡಿದ ಸಚಿವರಿಗೆ ಏನು ಉತ್ತರಿಸಬೇಕು ಎಂದು ತಿಳಿಯಲಿಲ್ಲ. ಆದರೂ ಹಾಸ್ಯದ ರೂಪದಲ್ಲಿ ಪ್ರತಿಕ್ರಿಯಿಸಿರುವ ಅವರು, “ನಿಮ್ಮ ಬಿರಿಯಾನಿಯಲ್ಲಿ ಲೆಗ್ ಇಲ್ಲದಿದ್ದರೆ ನಾನು ಏನು ಮಾಡಬೇಕು ಎಂದು ನೀವು ನಿರೀಕ್ಷಿಸಿರುವಿರಿ? ಲೆಗ್‌ಪೀ ಸ್ ಎಲ್ಲಿಂದ ಕೊಡಲಿ? ನನ್ನನ್ನೇಕೆ ಟ್ಯಾಗ್ ಮಾಡಿರುವಿರಿ ಸಹೋದರ ” ಎಂದು ಮಂತ್ರಿಗಳು ಪ್ರಶ್ನಿಸಿದ್ದಾರೆ.

Leave A Reply

Your email address will not be published.