” ಮದ್ಯ ಬೇಕಾ, ಹಾಗಾದ್ರೆ ಲಸಿಕೆ ಹಾಕ್ಕಾ” ಅಭಿಯಾನ | ಇನ್ಮುಂದೆ ಮದ್ದು ( ಲಸಿಕೆ ) ಹಾಕ್ಕೊಂಡ್ರೆ ಮಾತ್ರ ಸಿಗುತ್ತೆ ಮದ್ಯ

ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ. ಬಾರ್ ಮಾಲೀಕರ ಹಿಂದೆ ಸರ್ಕಾರದ ನಿರ್ಧಾರ ಇದೆ. ಸರ್ಕಾರದ ಈ ನಿರ್ಧಾರದ ಹಿಂದೆ ಒಂದು ತಂತ್ರಗಾರಿಕೆ ಅಡಗಿದೆ.

ಈ ಹಿಂದೆ ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದೆ ಕಷ್ಟ ಪಡುತ್ತಿರುವಾಗ ಕೂಲಿಕಾರ್ಮಿಕರನ್ನು ಆಕರ್ಷಿಸಲು ತೋಟಗಳ ಮಾಲೀಕರು ಒಂದು ತಂತ್ರಗಾರಿಕೆ ಮಾಡುತ್ತಿದ್ದರು. ಈಗಲೂ ಅದು ಬಳಕೆಯಲ್ಲಿದೆ. ಆಯಾ ತೋಟಗಳ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಒಂದಷ್ಟು ಮದ್ಯವನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ನೀಡುವುದು. ಬೇಕಾದರೆ, ಅದಕ್ಕೆ ಬೇಕಾದ ದುಡ್ಡನ್ನು ಅವರದೇ ಸಂಬಳದಿಂದ ಮುರಿದುಕೊಂಡರು ಕೂಡಾ ಸರಿ, ಮದ್ಯ ಜನರನ್ನು ತಕ್ಷಣಕ್ಕೆ ಆಕರ್ಷಿಸುತ್ತದೆ. ಅಂತಹುದೇ ಇನ್ನೊಂದು ಟೆಕ್ನಿಕ್ ಅನ್ನು ಸರಕಾರ ಮುಂದಕ್ಕೆ ಬಿಟ್ಟಿದೆ. ಇದು ” ಮದ್ಯ ಬೇಕಾ, ಹಾಗಾದ್ರೆ ಲಸಿಕೆ ಹಾಕ್ಕಾ” ಅಭಿಯಾನ ! ಇದು ಫೇಲ್ಯೂರ್ ಆಗೋ ಮಾತೇ ಇಲ್ಲ!!

ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ.

ಅಲ್ಲಿನ ಈ ಆದೇಶವನ್ನು ಬಾರ್ ಮಾಲೀಕರು ಕೂಡಾ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ “ಲಸಿಕೆ ಪಡೆದವರು ಮಾತ್ರ ಮದ್ಯ ಖರೀದಿಗೆ ಅರ್ಹರು” ಎಂದು ನೋಟಿಸ್ ಅಂಟಿಸಿದ್ದಾರೆ. ಈ ಆದೇಶದ ಅನ್ವಯ ಗ್ರಾಹಕರು ಆರಂಭದಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಮದ್ಯವನ್ನು ನೀಡಲಾಗುತ್ತದೆ. ಹೇಗಾದರೂ ಸರಿ, ಮದ್ಯದ ಆಸೆಗಾದರೂ ಸರಿ ಜನ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಲು ಎಂಬುದು ಇದರ ಉದ್ದೇಶ.

ಸರ್ಕಾರ ಈ ಆದೇಶ ಹೊರಡಿಸಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ. ಲಸಿಕೆ ಗುರಿಯನ್ನು ಮುಟ್ಟಲು ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಇಟಾವಾದ ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಕೆಲವು ರಾಜ್ಯಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿಲ್ಲ. ಅದಕ್ಕಾಗೇ ಮದ್ಯವನ್ನು ಮುಂದಕ್ಕೆ ಬಿಟ್ಟು ಜನರಿಗೆ ಗಾಳ ಹಾಕಲು ಸ್ಥಳೀಯ ಆಡಳಿತ ಹೊರಟಿರುವುದು.

Leave A Reply

Your email address will not be published.