ನಟ ಸೋನು ಸೂದ್ ಹೆಸರಿನಲ್ಲಿ ಒಂದು ಮಟನ್ ಸ್ಟಾಲ್ ಓಪನ್
ಕೊರೋನಾ ಉಲ್ಬಣ ಆದಂದಿನಿಂದ ಬಾಲಿವುಡ್ ನಟ ಸೋನು ಸೂದ್ ಬಹಳ ಪ್ರಚಾರದಲ್ಲಿ ಇದ್ದಾರೆ. ಕೊರೋನಾ ಒಂದನೆಯ ಅಲೆಯಿಂದ ಹಿಡಿದು ಇಲ್ಲಿಯವರೆಗೂ ಹಲವಾರು ಮಂದಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಲೇ ಇದ್ದಾರೆ. ಹಾಗೆ ಮಾಡುತ್ತಾ ಬಂದಿರುವ ಇವರ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದ್ದು, ಆತನಿಗೆ ಈಗ ದೇಶಾದ್ಯಂತ ಅಭಿಮಾನಿಗಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ಸ್ಥಾಪನೆ, ಚೀನಾ ಮತ್ತು ಫ್ರಾನ್ಸ್‌ನಿಂದ ಆಮ್ಲಜನಕ ಸಾಂದ್ರಕ ತರುತ್ತೇನೆ ಎಂದು ಹೇಳಿರುವ ಕಾರಣ ಆಂಧ್ರದಲ್ಲಿಯೂ ಇವರ ಅಭಿಮಾನಿ ಬಳಗ ಹೆಚ್ಚಿದೆ. ಇದೇ ಕಾರಣಕ್ಕೆ ಮಟನ್ ಷಾಪ್ ಮಾಲೀಕರೊಬ್ಬರು ತಮ್ಮ ‘ಕನ್ನಯ್ಯ ಮಟನ್ ಸ್ಟಾಲ್’ ಎಂಬ ಅಂಗಡಿಗೆ ನಟ ‘ ಸೋನು ಸೂದ್ ಚಾರಿಟಬಲ್ ಟ್ರಸ್ಟ್’ ಎಂಬ ಹೆಸರಿನಲ್ಲಿ ಸೋನು ಸೂದ್ ಫೋಟೋ ಹಾಕಿ ದೊಡ್ಡ ಬ್ಯಾನರ್ ಹಾಕಿದ್ದಾರೆ.
ಇದು ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ಸೋನು ಸೂದ್ ಗಮನಕ್ಕೆ ಕೂಡ ಬಂದಿದೆ. ಅವರು ಕೂಡಾ ಬ್ಯಾನರ್ ನೋಡಿದ್ದಾರೆ. ಮಟನ್. ಸ್ಟಾಲ್ ಗೆ ತನ್ನ ಹೆಸರು ತಳುಕು ಹಾಕಿದ್ದನ್ನು ಕಂಡು ಅವರು ಅಚ್ಚರಿ ಪಟ್ಟಿದ್ದು, “ಅರೆ ಭಯ್ಯಾ, ನಾನು ಶುದ್ಧ ಸಸ್ಯಾಹಾರಿನಯ್ಯಾ.. ಕನ್ನಯ್ಯ. ಇಂತಹ ನನ್ನ ಹೆಸರಲ್ಲಿ ಮಟನ್ ಷಾಪಾ ?! ” ಎಂದು ಟ್ವಿಟರ್‌ನಲ್ಲಿ ಹಾಸ್ಯಭರಿತವಾಗಿ ಟ್ವಿಟ್ ಮಾಡಿದ್ದಾರೆ.
ಅಲ್ಲದೆ, ” ನೀವಲ್ಲಿ ಸಸ್ಯಹಾರಿ ವಸ್ತುಗಳನ್ನು ಮಾರುವುದಿದ್ದರೆ ನಾನು ಸಹಾಯ ಮಾಡಬಲ್ಲೆ ” ಎಂದಿದ್ದಾರೆ. ಈಗ ಸೋನು ಸೂದ್ ಥರಾನೇ ಸೋನು ಸೂದ್ ಅಲಿಯಾಸ್ ಕನ್ನಯ್ಯ ಮಟನ್ ಶಾಪು ಕೂಡಾ ಸಕತ್ ಫೇಮಸ್ ಆಗಿದೆ. ಬ್ಯಾನರ್ ವೈರಲ್ ಆದ ನಂತರ ಸೋಷಿಯಲ್ ಗಳು, ಸಹಸ್ರಾರು ಮಂದಿ ಕಮೆಂಟ್ ಮೂಲಕ ತಮಾಷೆಯಾಗಿರುವ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಕೆಜಿ ಗೆ 700 ರೂ ಇರುವ ಮಟನ್, ಸೋನು ಸೂದ್ ಮಟನ್ ಶಾಪಿನಲ್ಲಿ 50 ರೂ. ಡಿಸ್ಕೌಂಟ್ ಅಂತೆ. ಅಲ್ಲದೆ, ಆ ಅಂಗಡಿಯಾತ ತನ್ನ ಕೈಯಿಂದ 50 ರೂಪಾಯಿಯನ್ನು ಸೋನು ಸೂದ್ ಫೌಂಡೇಶನ್ ಗೆ ಕೊಡುತ್ತಾನಂತೆ. ಒಟ್ಟಾರೆ ಅಭಿಮಾನಿ ದೇವರುಗಳು ಎಲ್ಲಿ ಬೇಕಾದ್ರೂ ಇರಬಹುದು, ಏನು ಬೇಕಾದರೂ ಮಾಡಬಹುದು, ಅಲ್ಲವೇ ?