ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೆ ಚಟುವಟಿಕೆ ಬಂದ್ | ನಿರ್ಧಾರದಿಂದ ಹಿಂದೆ ಸರಿದ ವಾಟ್ಸಪ್ !
ಸಾಮಾಜಿಕ ಜಾಲ ತಾಣ ವಾಟ್ಸ್ ಆ್ಯಪ್ ಬಳಕೆದಾರರು ಹೊಸ ಗೌಪ್ಯತೆ ನೀತಿ ಪಾಲನೆಗೆ ಸಂಬಂಧಿಸಿದಂತೆ ತಮ್ಮ ಸಮ್ಮತಿ ಸೂಚಿಸಬೇಕು. ಇಲ್ಲದಿದ್ದರೆ ಅವರ ವಾಟ್ಸ್ ಆಪ್ ನಲ್ಲಿ ಅವರ ಚಟುವಟಿಕೆ ಮೇಲೆ ಕೆಲವು ನಿರ್ಬಂಧ ಕ್ರಮಗಳು ಜಾರಿಗೆ ಬರಲಿವೆ ಎಂದು ಎಚ್ಚರಿಕೆ ನೀಡಿದ್ದ ವಾಟ್ಸ್ ಆಪ್ ತಾತ್ಕಾಲಿಕವಾಗಿ ಇದರಿಂದ ಹಿಂದೆ ಸರಿದಿದೆ.
ಮೇ 15 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ವಾಟ್ಸ್ ಆಪ್ ಹೇಳಿತ್ತು. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ವಾಟ್ಸ್ ಆ್ಯಪ್ ನ ನಡೆಯನ್ನು ವಿರೋಧಿಸಿತ್ತು. ಇದರ ಫಲ ಶೃತಿ ಎಂಬಂತೆ ಇದೀಗ ವಾಟ್ಸ್ ಆ್ಯಪ್ ಸದ್ಯಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
“ಸದ್ಯ ಚಟುವಟಿಕೆ ಕುಂಠಿತಗೊಳಿಸುವ ಅಥವಾ ಸೀಮಿತ ಅವಕಾಶ ನೀಡುವ ಯಾವುದೇ ಉದ್ದೇಶವನ್ನು ವಾಟ್ಸ್ ಆಪ್ ಹೊಂದಿಲ್ಲ. ಆದರೆ ಹೊಸ ಗೌಪ್ಯ ನೀತಿಗೆ ಸಮ್ಮತಿ ಸೂಚಿಸುವಂತೆ ಬಳಕೆದಾರರಿಗೆ ನಿರಂತರವಾಗಿ ಜ್ಞಾಪನಾ ಸಂದೇಶವನ್ನು ಇನ್ನು ಮುಂದೆಯೂ ಕಳುಹಿಸಲಾಗುವುದು. ಇದು ಮುಂದುವರಿಯಲಿದೆ ” ಎಂದು ವಾಟ್ಸ್ ಆಪ್ ಹೇಳಿದೆ.
ವಾಟ್ಸಪ್ ನ ಈ ನಿರ್ಧಾರಕ್ಕೆ ಕೇಂದ್ರ ಸರಕಾರ ಏನು ಹೇಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ವಾಟ್ಸಪ್ ಮತ್ತು ಫೇಸ್ಬುಕ್ ಗಳು ಬಂದ್ ಆಗುತ್ತವೆ ಎಂಬ ಸುದ್ದಿ ಕಳೆದ ಕೆಲವು ವಾರಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಚಟುವಟಿಕೆ ಕುಂಠಿತಗೊಳಿಸುವ ಯಾವುದೇ ಉದ್ದೇಶ ಇಲ್ಲ ಎಂದು ವಾಟ್ಸಪ್ ಹೇಳಿರುವ ಕಾರಣ, ಗ್ರಾಹಕರು ಯಾವುದೇ ಆತಂಕವಿಲ್ಲದೆ ತಮ್ಮ ನೆಚ್ಚಿನ ವಾಟ್ಸಪ್ ಅನ್ನು ಬಳಸಬಹುದು.