ಹಳ್ಳಿಯಲ್ಲಿ ಕೊರೋನಾ ಹರಡುವುದು ತಡೆಯೋಣ – ಜಾಗೃತಿ ಮೂಡಿಸಿದ ಗ್ರಾಪಂ ಸದಸ್ಯರು
ಗ್ರಾಮೀಣ ಭಾಗಗಳಲ್ಲಿ ಕೊರೋನಾ ವೈರಸ್ ಹರಡದಂತೆ ತಡೆಯಬೇಕು ಎಂದು ಸರಕಾರಗಳು ಹಾಗೂ ತಜ್ಞರು ಸಲಹೆ ನೀಡಿದ್ದರು. ಹೀಗಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.ಇದರ ಅನುಷ್ಟಾನ ಕ್ಕೆ ವಿವಿಧ ಕಡೆ ಪ್ರಯತ್ನ ನಡೆಯುತ್ತಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ಒಂದನೇ ವಾರ್ಡ್ ನ
ಗ್ರಾ ಪಂ ಸದಸ್ಯರು ಹಾಗೂ ಗ್ರಾಮಭಾರತ ತಂಡ ಸದಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕಾಲನಿಗಳಲ್ಲಿ ಕೊರೋನಾ ವೈರಸ್ ತಡೆಯ ಬಗ್ಗೆ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸುಬ್ರಹ್ಮಣ್ಯದ ಹೋಮಿಯೋಪತಿ ವೈದ್ಯ ಶ್ರೀ ಹೋಮಿಯೋಕೇರ್ ನ ಡಾ. ಆದಿತ್ಯ ಭಟ್ ಚಣಿಲ ಅವರ ಸಹಾಯದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಅವರು ಆರೋಗ್ಯ ಕಾಳಜಿ, ಕೊರೋನಾ ಮುಂಜಾಗ್ರತೆ ಹಾಗೂ ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಮಾನಸಿಕವಾಗಿ ಧೈರ್ಯದಿಂದ ಇರುವಂತೆ ತಿಳಿಸಿದರು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಆಗಾಗ ಕೈ ತೊಳೆಯಿರಿ. ಸಾಧ್ಯವಾದಷ್ಟು ಹಳ್ಳಿಗಳಲ್ಲೂ ಸದ್ಯ ದೂರದೂರವೇ ಇರುವಂತೆ ಸಲಹೆ ನೀಡಿದರು.ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಇದ್ದರೆ ತಕ್ಷಣವೇ ಆರೋಗ್ಯ ಕಾರ್ಯಕರ್ತರ ಮೂಲಕ ಸಮೀಪ ಆಸ್ಪತ್ರೆ, ವೈದ್ಯರನ್ನು ಕಾಣಲು ತಿಳಿಸಿದರು.ಕೊರೋನಾವೇ ಆಗಿರಬೇಕಾಗಿಲ್ಲ ಅಂತಹ ಭಯ ಇರಬಾರದು ಎಂದರು. ಇದೇ ವೇಳೆ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಉಚಿತವಾಗಿ ವಿತರಿಸಿದರು.
ಗ್ರಾಪಂ ಸದಸ್ಯರು ದಾನಿಗಳ ನೆರವಿನಿಂದ ಕೊರೋನಾ ಪಾಸಿಟಿವ್ ಬಂದಿರುವ ಬಡ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಿಸಿದರು. ಯಾವುದೇ ಭಯ, ಆತಂಕ ಬೇಕಾಗಿಲ್ಲ ಎಂದು ಮಾನಸಿಕ ಧೈರ್ಯ ತುಂಬಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಎಂ ಕೆ ಶಾರದಾ, ಲತಾಕುಮಾರಿ ಆಜಡ್ಕ, ವಸಂತ ಮೊಗ್ರ, ಪ್ರಮುಖರಾದ ಬಿಟ್ಟಿ ಬಿ ನೆಡುನೀಲಂ, ಮಹೇಶ್ ಪುಚ್ಚಪ್ಪಾಡಿ, ಸುರೇಶ್ ಮೊಗ್ರ, ಬಾಬು ಕಮಿಲ ಮೊದಲಾದವರಿದ್ದರು.