ಲಿವ್-ಇನ್ ರಿಲೇಶನ್ ಶಿಪ್ ನಿಷೇಧಿಸಿಲ್ಲ | ಪಂಜಾಬ್ – ಹರ್ಯಾಣ ನ್ಯಾಯ ಪೀಠ ಸ್ಪಷ್ಟನೆ
ಲಿವ್-ಇನ್ ಸಂಬಂಧವನ್ನು ನಿಷೇಧಿಸಿಲ್ಲ. ಅದು ಕಾನೂನಿನ ರಕ್ಷಣೆಗೆ ಅರ್ಹ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಲಿವ್-ಇನ್ ಸಂಬಂಧಗಳ ಬಗ್ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಎರಡು ವಿಭಿನ್ನ ಪೀಠಗಳು ಒಂದು ವಾರದ ಹಿಂದಷ್ಟೇ ಅಸಂತೃಪ್ತಿ ಬೀರಿದ್ದ ಬೆನ್ನಲ್ಲೇ ಅದೇ ನ್ಯಾಯಾಲಯದ ಮತ್ತೊಂದು ಪೀಠವು ಲಿವ್-ಇನ್ ಜೋಡಿಗೆ ರಕ್ಷಣೆಯನ್ನು ನೀಡಿ ಇಬ್ಬರು ವಯಸ್ಕರ ಸಾಂಗತ್ಯದ ಹಕ್ಕನ್ನು ಎತ್ತಿ ಹಿಡಿದಿದೆ.
ವ್ಯಕ್ತಿಗಳಿಗೆ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ವಿವಾಹದ ಮೂಲಕ ಔಪಚಾರಿಕಗೊಳಿಸುವ ಅಥವಾ ಲಿವ್-ಇನ್ ಸಂಬಂಧದ ಮೂಲಕ ಅನೌಪಚಾರಿಕವಾಗಿರಿಸುವ ಹಕ್ಕು ಅವರಿಬ್ಬರಿಗೆ ಇದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅರ್ಜಿದಾರರು ತಮಗೆ ರಕ್ಷಣೆ ನೀಡುವಂತೆ ಮಾಡಿದ ಮನವಿಗೆ ನ್ಯಾಯಾಲಯ ಸ್ಪಂದಿಸಿದೆ.
ಈ ಕುರಿತು ಆದೇಶ ನೀಡಿರುವ ನ್ಯಾ. ಸುಧೀರ್ ಮಿತ್ತಲ್ ಅವರ ಏಕಸದಸ್ಯ ಪೀಠವು, ಸಂವಿಧಾನದ ಅಡಿಯಲ್ಲಿ ಬರುವ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕಿನಡಿ ವ್ಯಕ್ತಿಯೊಬ್ಬರು ಸಂಗಾತಿಯ ಆಯ್ಕೆಯೂ ಸೇರಿಸಿದಂತೆ ತಾವು ಮಾಡಿಕೊಳ್ಳುವ ಆಯ್ಕೆಗಳ ಮೂಲಕ ತಮ್ಮೊಳಗಿನ ಸಾಮರ್ಥ್ಯದ ಪೂರ್ಣ ಬೆಳವಣಿಗೆಗೆ ಅನುವು ಮಾಡಿಕೊಡುವ ಹಕ್ಕೂ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿತು.
ಅಂತಹ ಸಂಬಂಧಗಳನ್ನು ಕಾನೂನಿನ ಅಡಿಯಲ್ಲಿ ನಿಷೇಧಕ್ಕೆ ಒಳಪಡಿಸಲು ಆಗುವುದಿಲ್ಲ. ಹಾಗಾಗಿ ಅಂತಹ ಸಂಬಂಧಗಳಿಗೆ ಒಳಪಡುವ ವ್ಯಕ್ತಿಗಳಿಗೆ ಕಾನೂನಿನಡಿ ರಕ್ಷಣೆ ಸಿಗುತ್ತದೆ ಎಂದಿದೆ ನ್ಯಾಯಾಲಯ.
ನ್ಯಾಯಾಲಯದ ಮುಂದೆ ಅರ್ಜಿದಾರರು, ತಾವಿಬ್ಬರೂ ಅರ್ಹ ವಯಸ್ಕರಾಗಿದ್ದು ತಾವು ಒಬ್ಬರು ಮತ್ತೊಬ್ಬರೆಡೆಗೆ ಹೊಂದಿರುವ ಭಾವನೆಗಳನ್ನು ಖಾತರಿಪಡಿಸಿಕೊಂಡು ಈ ಸಂಬಂಧವನ್ನು ಪ್ರವೇಶಿಸಿರುವುದಾಗಿ ತಿಳಿಸಿದ್ದರು. ಹಾಗಾಗಿ ಅಂತಹ ವ್ಯಕ್ತಿಗಳಿಗೆ ಕಾನೂನಿನ ರಕ್ಷಣೆ ಇರುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಆ ಮೂಲಕ ಜೋಡಿಗೆ ರಕ್ಷಣೆ ಒದಗಿಸಲು ನ್ಯಾಯಾಲಯವು ಪೊಲೀಸ್ ಇಲಾಖೆಗೆ ಸೂಚಿಸಿತು.