ಕರಾವಳಿಗರಿಗೆ ಪಡಿತರದಲ್ಲಿ ಇನ್ನು ಮುಂದೆ ಸಿಗಲಿದೆ ಕೆಂಪು ಕುಚಲಕ್ಕಿ

ಮಂಗಳೂರು : ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಕಾರ ಪ್ರಸ್ತುತ ಸರಬರಾಜು ಮಾಡುತ್ತಿರುವ ಕುಚಲಕ್ಕಿಯು ಸಾಂಪ್ರದಾಯಕ ವಾಗಿ ಕೆಂಪು ಕುಚ್ಚಲಕ್ಕಿ ಊಟ ಮಾಡುವವರೆಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಡಿತರದಲ್ಲಿ ನೀಡುವ ಅಕ್ಕಿಯನ್ನು ಕೆಲವು ಕಾರ್ಡುದಾರರು ಪಡೆಯುತ್ತಿಲ್ಲ. ಕೆಲವರು ಕರಾವಳಿ ಜಿಲ್ಲೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿ ಬರುತ್ತಿದೆ. ಹಾಗಾಗಿ ಕರಾವಳಿ ಜಿಲ್ಲೆಯ ಪಡಿತರದಲ್ಲಿ ಕೆಂಪು ಕುಚಲಕ್ಕಿ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಾರ್ವಜನಿಕ ವಿತರಣಾ ಪದ್ಧತಿಯಡಿ ಕೆಂಪು ಕುಚಲಕ್ಕಿ ವಿತರಿಸುವ ಬಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸ್ಥಳೀಯವಾಗಿ ವಿತರಿಸುವ ಕೆಂಪು ಕುಚ್ಚಲಕ್ಕಿಯನ್ನು ಸ್ಥಳೀಯ ಗಿರಣಿಗಳ ಮೂಲಕ ಸಂಸ್ಕರಿಸಿ ಪಡಿತರ ಅಂಗಡಿಗಳ ಮೂಲಕ ಗುಣಮಟ್ಟದ ಅಕ್ಕಿ ವಿತರಿಸಲು ಸರ್ಕಾರ ಅಗತ್ಯ ಯೋಜನೆ ರೂಪಿಸುತ್ತಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಗೆ ಪ್ರತಿ ತಿಂಗಳು 1 ಲಕ್ಷ ಕ್ವಿಂಟಾಲ್ ಕೆಂಪು ಕುಚಲಕ್ಕಿ ಅಗತ್ಯವಿದ್ದು, ಅವುಗಳ ಉತ್ಪಾದನೆಗೆ 16ರಿಂದ 18 ಲಕ್ಷ ಕ್ವಿಂಟಾಲ್ ಭತ್ತದ ಅವಶ್ಯಕತೆ ಇದೆ. ಈಗಾಗಲೇ ಈ ಎರಡು ಜಿಲ್ಲೆಗಳಲ್ಲಿ ಎಂ.ಒ. ಫೋರ್, ಜಯ, ಜ್ಯೋತಿ, ಭದ್ರಕಜೆ ಮುಂತಾದ ಕೆಂಪು ಕುಚಲಕ್ಕಿ ಉತ್ಪಾದನೆ ಮಾಡಬಹುದಾದ ಭತ್ತಗಳು ಬೆಳೆಯುತ್ತಿದೆ. ಅಗತ್ಯಬಿದ್ದರೆ ಬೆಳಗಾವಿ, ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ಮೈಸೂರು ಜಿಲ್ಲೆಗಳಿಂದ ಗುಣಮಟ್ಟದ ಭತ್ತ ಖರೀದಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡಗಿ ಮಾತನಾಡಿ ಕರಾವಳಿ ಜಿಲ್ಲೆಗೆ ಕೆಂಪು ಕುಚಲಕ್ಕಿಗೆ ಸಂಬಂಧಪಟ್ಟಂತೆ ಭತ್ತಗಳ ಸಂಗ್ರಹಣೆ, ಸಂಸ್ಕರಣೆ ಹಾಗೂ ಸಂಬಂಧಿತ ಭತ್ತದ ತಳಿಗೆ ಸಬ್ಸಿಡಿ ನೀಡಲು ಕೇಂದ್ರ ಸರಕಾರದ ಅನುಮೋದನೆ ಪಡೆಯಲು ರಾಜ್ಯ ಆಹಾರ ನಿಗಮ ಪ್ರಯತ್ನ ಮಾಡಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಮಾತನಾಡಿ ರೈತರು ಬೆಳೆದ ಕೆಂಪು ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆಯಡಿ ಖರೀದಿ ಮಾಡಲು ಈವರೆಗೆ ಅವಕಾಶ ಇರಲಿಲ್ಲ. ಪ್ರಸ್ತುತ ಭಾರತದ ಆಹಾರ ನಿಗಮದಲ್ಲಿ ಕೆಂಪು ಭತ್ತಕ್ಕೆ ಕನಿಷ್ಟ ಬೆಲೆ ನೀಡಲು ಅನುಮತಿ ದೊರಕಿದೆ. ಈಗ ಪಡಿತರದಲ್ಲಿ ಪ್ಯಾರಾ ಬಾಯಿಲ್ಡ್ ಅಕ್ಕಿ ದೊರಕುತ್ತಿದ್ದು, ಇನ್ನು ಮುಂದೆ ಕೆಂಪು ಕುಚಲಕ್ಕಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯಕ್, ಪ್ರತಾಪ್ ಸಿಂಹ ನಾಯಕ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಪಿ.ಆರ್. ರಮ್ಯ, ವಿವಿಧ ಅಕ್ಕಿ ಗಿರಣಿಗಳ ಮಾಲಕರು ಉಪಸ್ಥಿತರಿದ್ದರು.

Leave A Reply

Your email address will not be published.