Ohio: ಈತನೇ ನೋಡಿ ಜಗತ್ತಿನ ಅತ್ಯಂತ ಸೀನಿಯರ್ ಶಿಶು – 31 ವರ್ಷ ಶೈತ್ಯಾಗಾರದಲ್ಲಿದ್ದ ಹಳೇ ಭ್ರೂಣಕ್ಕೆ ಜೀವ ಜನನ!

Share the Article

Ohio: ಐವಿಎಫ್ ಕೇಂದ್ರದಲ್ಲಿ ಜನಿಸಿದ ಶಿಶುವೊಂದು ‘ನ ಭೂತೋ’ ಎಂಬ ಮಾತಿಗೆ ಸಾಕ್ಷಿಯಂತೆ ಇದೆ. ಕಾರಣ ಈ ಮಗು ಜಗತ್ತಿನ ಅತ್ಯಂತ ಹಿರಿಯ ಮಗು!! ಹಿರಿಯ ಮಗು ಅಂದ್ರೆ ಏನಪ್ಪಾ ಅಂತ ಗೊಂದಲಕ್ಕೆ ಬೀಳುವ ಅಗತ್ಯ ಇಲ್ಲ! ಈ ಮಗು ಬರೋಬ್ಬರಿ 31 ವರ್ಷಗಳ ಕಾಲ ಥಂಡಿ ಹೊದ್ದು ಮಲಗಿತ್ತು. ಸರಿಯಾಗಿ 11,148 ದಿನಗಳ ಕಾಲ ಶೈತ್ಯಾಗಾರದಲ್ಲಿ ಫಲಿತ ಭ್ರೂಣ ಒಂದನ್ನು ಸಂರಕ್ಷಿಸಿ ಇಡಲಾಗಿತ್ತು. ಹಾಗೆ ಸಂರಕ್ಷಿಸಿಡಲ್ಪಟ್ಟಿದ್ದ ಭ್ರೂಣವನ್ನು ಓರ್ವ ತಾಯಿಯ ಗರ್ಭಕ್ಕೆ ಸೇರಿಸಿ ಆಲ್ಲಿ ಮಗುವನ್ನು ಬೆಳೆಯಲು ಅವಕಾಶ ಮಾಡಿಕೊಡಲಾಗಿದೆ. ಶೀತಲ ವಾತಾವರಣದಲ್ಲಿದ್ದ ಮಗು ಅಮ್ಮನ ಗರ್ಭದ ಹಿತವಾದ ಬೆಚ್ಚನೆಯ ಆಸರೆಗೆ ಬಂದು, ಅಲ್ಲಿಯೇ ಅಮ್ಮನ ಕರುಳ ತುದಿಯ ಬಳ್ಳಿಗೆ ಜೋಕಾಲಿ ಆಡುತ್ತಾ ಬೆಳೆದು, ಇದೀಗ ಅತ್ಯಂತ ಆರೋಗ್ಯವಾಗಿ ಜನ್ಮ ತಾಳಿದೆ. ಆ ಮೂಲಕ ವೈದ್ಯ ಲೋಕವು ಅಚ್ಚರಿಯೊಂದನ್ನು ಮನುಷ್ಯ ಕುಲದಲ್ಲಿ ಸಂಸ್ಥಾಪಿಸಿದೆ.

1994ರಲ್ಲಿ ಅಮೆರಿಕದ ಓಹಿಯೋದ ಲಿಂಡಾ ಆರ್ಚೇಡ್ ಎಂಬ ಮಹಿಳೆಯೊಬ್ಬಳು ಒಟ್ಟು 3 ಭ್ರೂಣಗಳನ್ನು ಶೇಖರಿಸಿಟ್ಟಿದ್ದಳು. ನಂತರ ಕೆಲ ವರ್ಷಗಳ ಬಳಿಕ ಮಕ್ಕಳಾಗದ ಪೋಷಕರಿಗೆ ಈ ಭ್ರೂಣಗಳನ್ನು ದಾನ ಮಾಡಲು ಆಕೆ ನಿರ್ಧರಿಸಿದಳು. 2 ವರ್ಷಗಳ ಹಿಂದೆ, 2023ರಲ್ಲಿ ಲಿಂಡ್ಲೆ – ಟಿಮ್ ದಂಪತಿಗೆ ಈ 3 ಭ್ರೂಣಗಳನ್ನು ದಾನ ಮಾಡಲಾಯಿತು. ಇವುಗಳಲ್ಲಿ ಒಂದು ಭ್ರೂಣವನ್ನು ಯಶಸ್ವಿಯಾಗಿ ಲಿಂಡ್ಲೆ ಗರ್ಭದಲ್ಲಿರಿಸಿ ಬೆಳೆಸಲಾಯಿತು. ಅದೀಗ ಮಗುವಾಗಿ ಹುಟ್ಟಿದೆ.

ಅಮೆರಿಕಾದಲ್ಲಿ ಪ್ರತಿಶತ 2ರಷ್ಟು ಮಕ್ಕಳು ಐವಿಎಫ್‌ನಿಂದ ಜನಿಸುತ್ತಿವೆ. ಆದರೆ ಭ್ರೂಣವನ್ನೇ ದತ್ತು ಪಡೆದು ಅದರಿಂದ ಮಗು ಮಾಡಿಕೊಳ್ಳುವ ಪ್ರಕ್ರಿಯೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದೀಗ ಅಮೆರಿಕದಲ್ಲಿ ಸುಮಾರು 15 ಲಕ್ಷ ಭ್ರೂಣಗಳನ್ನು ಸಂರಕ್ಷಿಸಿಡಲಾಗಿದೆ ಎನ್ನಲಾಗಿದೆ.

31 ವರ್ಷಗಳ ಕಾಲ ಭ್ರೂಣಾವಸ್ಥೆಯಲ್ಲೇ ಇದ್ದ ಕಾರಣ ಇದನ್ನು ಜಗತ್ತಿನ ಅತ್ಯಂತ ಸೀನಿಯರ್ ಶಿಶು ಎಂದು ಕರೆಯಲಾಗುತ್ತಿದೆ. ಮಗು ಆರೋಗ್ಯವಾಗಿದೆ. ಮಗುವಿನ ಪೋಷಕರು ಖುಷಿಯಾಗಿದ್ದು, ಮಗುವಿನ ಭ್ರೂಣವನ್ನು ದಾನ ಮಾಡಿದ ಲಿಂಡಾ ಜತೆ ವೈದ್ಯ ಲೋಕ ಸಂತಸ ವ್ಯಕ್ತಪಡಿಸಿದೆ.

Comments are closed.