Dharmasthala Case: ಸೌಜನ್ಯ 2012ರಲ್ಲಿ ಉರಿಸಿದ ಅಗ್ನಿ ಇಂದು ಕೂಡ ಉರಿತಿದೆ – ಸಮಾನ ಮನಸ್ಕರ ವೇದಿಕೆಯಲ್ಲಿ ವಕೀಲ ಎಸ್.ಬಾಲನ್ ಹೇಳಿಕೆ

Share the Article

Dharmasthala Case: ಸೌಜನ್ಯ ಅಂದ್ರೆ ಫ್ಲವರ್ ಅಲ್ಲ ಫೈರ್, ಅವಳು 2012ರಲ್ಲಿ ಉರಿಸಿದ ಅಗ್ನಿ ಇಂದು ಕೂಡ ಉರೀತಿದೆ ಎಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾಗುತ್ತಿರುವ ನೂರಾರು ಅತ್ಯಾಚಾರ ಮತ್ತು ಸಾವುಗಳ ನ್ಯಾಯಕ್ಕಾಗಿ ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ವಕೀಲ, ಸಾಮಾಜಿಕ ಹೋರಾಟಗಾರ ಬಾಲನ್ ಹೇಳಿದ್ದಾರೆ. ಸಿಬಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಅವರು, CBI ಡುಬಾಕೋರ್, ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಅಲ್ಲ, ಅದು ಕಲೆಕ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಹೇಳಿಕೆ ನೀಡಿದ್ದಾರೆ.

1979ರಲ್ಲಿ ವೇದವಲ್ಲಿ 1983ರಲ್ಲಿ ಪದ್ಮಲತಾ, 2003ರಲ್ಲಿ ಅನನ್ಯಾ ಭಟ್, 2012ರಲ್ಲಿ ಸೌಜನ್ಯ ಸೇರಿದಂತೆ ಹಲವು ಮಹಿಳೆಯರಿಗೆ ಅನ್ಯಾಯವಾಗಿದೆ. ಅದಕ್ಕಾಗಿ ನ್ಯಾಯ ಕೇಳಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ವ್ಯವಸ್ಥೆ ಸರಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವೆಲ್ಲ ಹಿಂದೂಗಳು, ಎಲ್ಲಾರು ಒಂದೇ, ಇಷ್ಟೊಂದು ಅನ್ಯಾಯ ಆಗಿದೆ ಎಲ್ಲಪ್ಪಾ ಹಿಂದೂ ಪರ ಸಂಘಟನೆಗಳು? ಶೋಭಾ ಕರಂದ್ಲಾಜೆ ಎಲ್ಲಿ? ಭಜರಂಗದಳ ಎಲ್ಲಿ? ಸೌಜನ್ಯ, ಅನನ್ಯಾ ಭಟ್‌, ವೇದವಲ್ಲಿ ಹಿಂದೂ ಹೆಣ್ಣು ಮಕ್ಕಳಲ್ವಾ? ಸೌಜನ್ಯ, ಪಾಕಿಸ್ತಾನದ ಹೆಣ್ಣು ಮಗಳು ಅಲ್ಲ, ಆಕೆ ಮುಸ್ಲಿಂ ಅಲ್ಲಾ, ಹಿಂದೂ. ಆದರೆ ಹಿಂದೂ-ಮುಸ್ಲಿಂ ಅಜೆಂಡಾ ಇಟ್ಟಕೊಂಡು ಬದುಕುತ್ತಿರುವ ಹಿಂದೂಪರ ಸಂಘಟನೆಗಳು ಈಗ ಎಲ್ಲಿವೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ, ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಮಾತನಾಡಿ, ‘ತಮ್ಮನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ನೋಟಿಸ್ ಕೊಡುವ ಅಭ್ಯಾಸ ಧರ್ಮಸ್ಥಳದಲ್ಲಿ 1945ರಿಂದಲೂ ನಡೆಯುತ್ತಾ ಬಂದಿದೆ. ಇದೆಲ್ಲಾ ಈವಾಗಲ್ಲ ಅಂದಿನ ಕಾಲದಲ್ಲಿ ಅಂದರೆ 1944ರಲ್ಲಿ ಋಷ್ಟ್ರ ಕವಿ ಕುವೆಂಪು ಅವರಿಗೆ ನೋಟಿಸ್ ಕೊಟ್ಟವರು ಇವರು. ಅಂದಿನಿಂದ ಇಂದಿನವರೆಗೂ ಈ ಪದ್ದತಿ ಮುಂದುವರೆದಿದೆ. ಗ್ಯಾಗ್ ಆರ್ಡರ್ ಇದ್ದ ಹಿನ್ನೆಲೆ ಅನೇಕ ಮಾಧ್ಯಮಗಳು ಧರ್ಮಸ್ಥಳ ವರದಿ ಮಾಡದೆ ಸುಮ್ಮನಿದ್ದವು. ಈಗ ವಕೀಲರು ಈ ಆರ್ಡರ್ ಅನ್ನು ತೆಗೆದು ಹಾಕಿಸಿದ್ದಾರೆ. ಇನ್ನು ಮುಂದೆಯಾದರೂ ಬೆನ್ನು ಮೂಳೆ ಮುರಿದ ಮುಖ್ಯವಾಹಿನಿಗಳು ವರದಿ ಮಾಡಿಲಿ ಎಂದು ಅಭಿಪ್ರಾಯ ಪಟ್ಟರು.

ಅನೇಕ ವರ್ಷಗಳಿಂದ ಧರ್ಮಸ್ಥಳದಲ್ಲಿ ಸಾವು, ಕಲೆಗಳು ನಡೆಯುತ್ತಿದೆ. 150ಕ್ಕೂ ಹೆಚ್ಚು ಅಪರಿಚಿತ ಶವಗಳು ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ಮಾಹಿತಿ ಇದೆ. ಆದರೆ ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಸರಿಯಾಗಿ ಕ್ರಮ ವಹಿಸಿಲ್ಲ. ಒಂದು ವೇಳೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೆ ಈದಕ್ಕೆಲ್ಲ ಕಾರಣ ಯಾರೆಂಬುದನ್ನು ಕಂಡುಹಿಡಿಯಬಹುದಿತ್ತು ಎಂದು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, “ಎಸ್‌ಐಟಿ ತಂಡದಲ್ಲಿರುವ ಇನ್‌ಸ್ಪೆಕ್ಟರ್ ಮಂಜುನಾಥ್ ಗೌಡ ದೂರುದಾರನನ್ನು ಬೆದರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ದೂರನ್ನು ವಾಪಸ್ ತೆಗೆದುಕೋ, ಇಲ್ಲವಾದರೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ, ಎಷ್ಟು ಸಾಕ್ಷಿಗಳನ್ನು ಕೊಡುತ್ತೀಯೋ ಅಷ್ಟು ಹೆಚ್ಚಿನ ಶಿಕ್ಷೆಯನ್ನು ನೀನು ಅನುಭವಿಸಬೇಕಾಗುತ್ತದೆ ಎಂದು ಮಂಜುನಾಥ್ ಗೌಡ ಹೆದರಿಸಿದ್ದಾರೆ. ಈ ಅಧಿಕಾರಿಯನ್ನು ಮೊದಲು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸಮಾನ ಮನಸ್ಕರ ವೇದಿಕೆಯಲ್ಲಿ ಹೋರಾಟಗಾರರಾದ ಚೇತನ್ ಅಹಿಂಸಾ, ಎಚ್.ಎಂ. ವೆಂಕಟೇಶ್, ನರಸಿಂಹಮೂರ್ತಿ, ರಂಗನಾಥ್, ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದು, ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಆಗಬೇಕು ಎಂದು ಒತ್ತಾಯಿಸಿದರು.

Comments are closed.