Puttur: ಪುತ್ತೂರು: ವರದಕ್ಷಿಣೆ ಕಿರುಕುಳ ಆರೋಪ: ಪತಿ, ಮನೆಯವರ ವಿರುದ್ಧ ದೂರು!

Puttur: ಗಂಡ, ಅತ್ತೆ, ನಾದಿನಿಯರು ಹಾಗೂ ಮೈದುನ ಸೇರಿಕೊಂಡು ಹೆಚ್ಚಿನ ವರದಕ್ಷಿಣೆ ಕೇಳಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಒಡ್ಡಿರುವ ಆರೋಪ ಹಾಗೂ ಗಂಡ ತ್ರಿವಳಿ ತಲಾಕ್ ನೀಡಿರುವ ಬಗ್ಗೆ ಮಹಿಳೆಯೋರ್ವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಬಂಟ್ವಾಳ ಕುಕ್ಕಾಜೆ ಅಬ್ದುಲ್ ಖಾದರ್‌ರವರ ಪುತ್ರಿ ಮಮ್ರಾಜ್ ರವರು ತನ್ನ ಗಂಡ ಕೊಡಿಪಾಡಿ ಜೋಳ ನಿವಾಸಿ ಮುಹಮ್ಮದ್ ಶರೀಫ್, ಅತ್ತೆ ಖತೀಜಾ, ಮೈದುನ ಅಹಮದ್ ಸಿರಾಜುಲ್ ಮುನೀರ್, ನಾದಿನಿಯರಾದ ಸುಮಯ್ಯ, ಆಯಿಷಾ ಎಂಬವರ ಮೇಲೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಡಿಪ್ಪಾಡಿ ಜೋಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮುಹಮ್ಮದ್ ಶರೀಫ್‌ರವರ ಜೊತೆ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನನ್ನ ವಿವಾಹವಾಗಿತ್ತು. ಮದುವೆಯ ಸಂದರ್ಭದಲ್ಲಿ ಗಂಡನ ಕಡೆಯವರ ಬೇಡಿಕೆಯಂತೆ ನನ್ನ ತಂದೆಯವರು 80 ಪವನ್ ಚಿನ್ನಾಭರಣ, ಗಂಡನಿಗೆ ಬೆಲೆಬಾಳುವ ಒಂದು ಕೈಗಡಿಯಾರ, ಚಿನ್ನದ ನಾಣ್ಯ ನೀಡಿರುತ್ತಾರೆ. ಅಲ್ಲದೆ ನನ್ನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಎರಡು ಲಕ್ಷ ರೂಪಾಯಿ ಹಣವನ್ನು ಗಂಡನ ಕೈಯಲ್ಲಿ ಕೊಟ್ಟಿರುತ್ತಾರೆ. ಮದುವೆಯ ಸಂದರ್ಭದಲ್ಲಿ ನಾನು ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ವ್ಯಾಸಂಗ ಮುಂದುವರಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ಹೇಳಿದ್ದರು. ಕಾಲೇಜು ಆರಂಭವಾದ ವೇಳೆ ನನ್ನ ತಂದೆ ಕೊಟ್ಟಿರುವ ಹಣದಲ್ಲಿ ಫೀಸ್ ಕಟ್ಟಲು ಹಣ ಕೇಳಿದಾಗ, ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪ್ರತಿ ದಿನ ನನ್ನ ಗಂಡ, ಅತ್ತೆ, ಮೈದುನ ನಾದಿನಿಯರು ಹೆಚ್ಚಿನ ವರದಕ್ಷಿಣೆ ಕೇಳಿ ನನಗೆ ಪ್ರತಿದಿನ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಜೂ. 4ರಂದು ಗಂಡ ನನ್ನ ತವರು ಮನೆಗೆ ಬಂದಿದ್ದು ಅಲ್ಲಿ ಅವಾಚ್ಯ ಶಬ್ದಗಳಿಂದ ನನಗೂ ನನ್ನ ತಾಯಿಗೂ ಬೈದು, ನಾನು ನಿನಗೆ ತಲಾಕ್ ನೀಡಿದ್ದೇನೆ ಎಂದು ಮೂರು ಸಲ ತಲಾಕ್ ಎಂದು ಉಚ್ಚರಿಸಿದ್ದು, ಇನ್ನು ನೀನು ನನ್ನ ಪತ್ನಿ ಅಲ್ಲ ನಿನಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಸದ್ಯ 085, 115(2), 352, 351 (3), 3 (5) ಬಿ ಎನ್ ಎಸ್, ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3,4, ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪೊಲೀಸರು ಪ್ರಕರಣ (0042/2025) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Hassan: ಹಾಸನದಲ್ಲಿ ಒಂದೇ ತಿಂಗಳಗೆ 15 ಮಂದಿ ‘ಹೃದಯಾಘಾತಕ್ಕೆ ಬಲಿ – ತನಿಖೆಯಲ್ಲಿ ಸ್ಪೋಟಕ ಸತ್ಯ ಬಯಲು
Comments are closed.