Kasaragod: ದೈವ ಕಲಾವಿದನ ಸಾವು: ಮದ್ಯದ ನಶೆಯಲ್ಲಿ ಸ್ನೇಹಿತನಿಂದಲೇ ಕೊಲೆ

Kasaragod: ದೈವ ಕಲಾವಿದ ಟಿ.ಸತೀಶನ್ ಯಾನೆ ಬಿಜು (46) ಅವರ ಕೊಲೆಯಾಗಿದೆ. ಸ್ನೇಹಿತ ಚಿದಾನಂದನಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಇವರಾಗಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಸತೀಶನ್ ಕಳೆದ ಮಂಗಳವಾರ ಸಂಜೆ ನೆರೆಮನೆಯ ನಿವಾಸಿ ಚೋಮಣ್ಣ ನಾಯ್ಕ ಅವರ ಮನೆಯಲ್ಲಿ ಅರೆ ಪ್ರಜ್ಞಾವಸ್ಥೆಯನ್ನು ಕಂಡು ಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ರಕ್ಷಣೆ ಮಾಡಲು ಆಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಸತೀಶನ್ ಅವರ ಸಾವಿನ ಕುರಿತು ಅನುಮಾನ ಮೂಡಿದೆ. ಮೇಲ್ನೋಟಕ್ಕೆ ದೇಹದಲ್ಲಿ ಗಾಯಗಳು ಕಂಡು ಬರದಿದ್ದರೂ ಕುತ್ತಿಗೆಯ ಎಲುಬು ಮುರಿದಿರುವುದು, ದೇಹದ ಹಿಂಭಾಗ ಹಾಗೂ ಆಂತರಿಕ ಗಾಯಗಳು ಕಂಡು ಬಂದಿದೆ. ಹಾಗಾಗಿ ಪೊಲೀಸರು ಇದನ್ನು ಕೊಲೆ ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಸ್ನೇಹಿತರಾಗಿದ್ದ ಸತೀಶನ್ ಮತ್ತು ಚಿದಾನಂದ ಅವರು ಆಗಾಗೆ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ ಅವರ ಮನೆಯಲ್ಲಿ ಮದ್ಯ ಸೇವಿಸುವ ಹವ್ಯಾಸವನ್ನು ಹೊಂದಿದ್ದರು. ಸೋಮವಾರ ಮಧ್ಯಾಹ್ನ ಕೂಡಾ ಎಂದಿನಂತೆ ವರಾಂಡದಲ್ಲಿ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ನಂತರ ಮದ್ಯದ ಅಮಲಿನಲ್ಲಿ ಸತೀಶನ್ ಮತ್ತು ಚಿದಾನಂದ ನಡುವೆ ಮಾತಿನ ಚಕಮಕಿ ನಡೆದಿದೆ.
ಇವರ ವಾಗ್ವಾದ ತೀವ್ರಗೊಂಡಿದ್ದು, ಕುಳಿತಿದ್ದ ಸತೀಶನ್ ಅವರನ್ನು ಚಿದಾನಂದ ಹಿಂದಿನಿಂದ ತಳಿದ್ದಾನೆ. ಸತೀಶನ್ ಕೆಳಗೆ ಬಿದ್ದು, ತಲೆ ನೆಲಕ್ಕೆ ಬಡಿದಿದೆ. ನಂತರ ಆತನನ್ನು ಎತ್ತಿ ವರಾಂಡದಲ್ಲಿ ಮಲಗಿಸಲಾಯಿತು. ನೋವಾಗುತ್ತಿದೆ ಎಂದು ಹೇಳಿದಾಗ ಮೂವ್ ಮುಲಾಮು ಹಚ್ಚಲಾಗಿದೆ. ನಂತರ ನೋವು ನಿವಾರಕ ಮಾತ್ರ ನೀಡಲಾಗಿದೆ. ಈ ಮಧ್ಯೆ ಸತೀಶನ್ ಅರೆ ಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಅವರ ನಿದ್ರೆ ಮಾಡುತ್ತಿದ್ದಾರೆಂದು ಭಾವಿಸಿ ಚಿದಾನಂದ ಅಲ್ಲಿಂದ ಹೋಗಿದ್ದಾನೆ.
ಸತೀಶನ್ ಮನೆಗೆ ಬಾರದೆ ಇದ್ದದ್ದನ್ನು ನೋಡಿ ಸಹೋದರಿ ಸೌಮಿನಿ ಫೋನ್ ಕರೆ ಮಾಡಿದ್ದಾರೆ. ಯಾರೋ ಸ್ವೀಕರಿಸಿದ್ದು, ಏನು ಹೇಳಿದರು ಎಂದು ತಿಳಿಯಲಿಲ್ಲ. ಸತೀಶನ್ ಮದ್ಯದ ಅಮಲಿನಲ್ಲಿದ್ದರಬಹುದೆಂದು ಸಹೋದರಿ ಭಾವಿಸಿ ಸುಮ್ಮನಾಗಿದ್ದಾರೆ. ಮಂಗಳವಾರ ಸಂಜೆಯಾದರೂ ಸಹೋದರ ಬಾರದೇ ಇದ್ದಾಗ ಸೌಮಿನಿ ನೆರೆಯ ಚೋಮಣ್ಣ ನಾಯ್ಕ ಅವರ ಮನೆಗೆ ಹೋಗಿದ್ದು, ಅಲ್ಲಿ ಸತೀಶನ್ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿರುವುದು ಕಂಡು ಬಂದಿದೆ.
ಚಿದಾನಂದ ಸ್ನೇಹಿತನ ಮರಣೋತ್ತರ ಪರೀಕ್ಷೆಯ ಸಮಯದಲ್ಲಾಗಿ, ಅಂತ್ಯಸಂಸ್ಕಾರದಲ್ಲಾಗಲೀ ಭಾಗವಹಿಸದೇ ಇರುವುದನ್ನು ಕಂಡು ಪೊಲೀಸರಿಗೆ ಆತನ ಮೇಲೆ ಸಂಶಯ ಉಂಟಾಗಿದೆ. ನಂತರ ಆತನನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ ಸಂಪೂರ್ಣ ಮಾಹಿತಿ ತಿಳಿದು ಬಂದಿದೆ.
Comments are closed.