ಅನ್ಯ ಜಾತಿಯ ಹುಡುಗನ ಜತೆ ಮಗಳು ಮದುವೆ: ಒಂದೇ ಕುಟುಂಬದ 3 ಜನ ಆತ್ಮಹತ್ಯೆ

ಎಚ್.ಡಿ.ಕೋಟೆ: ಮನೆ ಮಗಳು ಅನ್ಯ ಜಾತಿಯ ಹುಡುಗನ ಜತೆಗೆ ಮದುವೆ ಆದ ಕಾರಣಕ್ಕೆ ಒಂದೇ ಕುಟುಂಬದ ಮೂವರು ಡೆತ್ ನೋಟ್ ಬರೆದಿಟ್ಟು ಪಟ್ಟಣ ಸಮೀಪದ ಹೆಬ್ಬಾಳ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಬೂದನೂರು ಗ್ರಾಮದ ಮಹದೇವಸ್ವಾಮಿ (55), ಪತ್ನಿ ಮಂಜುಳಾ (42) ಹಾಗೂ ಕಿರಿಯ ಪುತ್ರಿ ಹರ್ಷಿತಾ (18) ಮೃತರು.

ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ಮಹದೇವಸ್ವಾಮಿಯವರ ಹಿರಿಯ ಪುತ್ರಿ ಮೈಸೂರಿನಲ್ಲಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುವ ಸಂದರ್ಭ ಕೋಟೆ ತಾಲೂಕಿನ ಉದ್ದೂರು ಹಾಡಿಯ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಳು. ಈಗ್ಗೆ ಮೂರು ದಿನಗಳ ಹಿಂದೆ ಆತನ ಜತೆ ಪೋಷಕರಿಗೆ ತಿಳಿಸದೆ ಮೈಸೂರಿನಲ್ಲಿ ಮದುವೆ ಕೂಡಾ ಆಗಿದ್ದಳು. ಈ ಸುದ್ದಿ ತಿಳಿದ ಕುಟುಂಬದ ಮೂವರು ಮರ್ಯಾದೆಗೆ ಅಂಜಿ ಪಟ್ಟಣದ ಹೆಬ್ಬಾಳ ಜಲಾಶಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಜಲಾಶಯದ ಬಳಿ ಬೈಕ್ ಒಂದು ದಿನವಿಡೀ ನಿಂತಿತ್ತು. ಅದನ್ನು ಕಂಡಗ್ರಾಮದ ಯುವಕರು ಅನುಮಾನ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ವಿಚಾರ ತಿಳಿದು ಬಂದಿದೆ. ತಕ್ಷಣ ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಾಹನ ಪರೀಕ್ಷಿಸಿದಾಗ ಮೃತರು ಬರೆದಿಟ್ಟ ಡೆತ್ ನೋಟ್ ಸಿಕ್ಕಿದೆ. ಕೂಡಲೇ ಪೊಲೀಸರು ಅಗ್ನಿಶಾಮಕ ದಳದ ಅಧಿಕಾರಿಗಳು ಬೋಟ್ ಮೂಲಕ ಶೋಧ ಕಾರ್ಯ ಆರಂಭಿಸಿದ್ದಾರೆ. ನಂತರ ಮೂವರ ಮೃತ ದೇಹ ನೀರಿನಿಂದ ಹೊರ ತೆಗೆದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.
ಮೃತರು ಡೆತ್‌ನೋಟ್‌ನಲ್ಲಿ ನಮ್ಮ ಸಾವಿಗೆ ನನ್ನ ಮಗಳು ಕಾರಣ. ಅವಳಿಗೆ ಯಾವುದೇ ಆಸ್ತಿ ಕೊಡಬೇಡಿ ಅವಳನ್ನು ಸಾಯುವವರೆಗೂ ಜೈಲಲ್ಲಿ ಹಾಕಿ ಶಿಕ್ಷೆ ಕೊಡಿ ಎಂದು ನೋವಿನಿಂದ ಮನವಿ ಮಾಡಿಕೊಂಡಿದ್ದಾರೆ. ಕುಟುಂಬದ ಮೂವರ ಸಾವಿನಿಂದ ತಾಲೂಕಿನ ಬೂದನೂರು ಗ್ರಾಮ ಸ್ಮಶಾನ ಮೌನ ವಹಿಸಿದೆ.