Davanagere: ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದಲೇ ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್‌ನಲ್ಲಿ ಅಡವಿಟ್ಟ ಗೋಲ್ಡ್‌ ಲೋನ್‌ ಆಫೀಸರ್

Share the Article

Davanagere: ಗೋಲ್ಡ್‌ ಲೋನ್‌ ಆಫೀಸರ್‌ ತಾನು ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನಿಂದಲೇ ಕೆಜಿಗಟ್ಟಲೇ ಚಿನ್ನ ಕದ್ದು ಅದನ್ನು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟ ವಿಚಿತ್ರ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ದೇವರಾಜ್‌ ಅರಸ್‌ ಬಡಾವಣೆಯ ವಾಸಿಯಾಗಿರುವ ಸಂಜಯ್‌ ಟಿಪಿ ಎಂಬಾತ ನಿಟ್ಟುವಳ್ಳಿಯಲ್ಲಿರುವ ಸಿಎಸ್‌ಬಿ ಬ್ಯಾಂಕ್‌ನಲ್ಲಿ ಗೋಲ್ಡ್‌ ಲೋನ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದ. ಒಂದು ದಿನ ಬ್ಯಾಂಕ್‌ ಆಡಿಟ್‌ ಮಾಡುವ ಸಂದರ್ಭದಲ್ಲಿ ಬಂಗಾರ ಕಡಿಮೆ ಇರುವುದು ತಿಳಿದು ಬಂದಿದೆ. ಕೂಡಲೇ ಬ್ಯಾಂಕ್‌ ಮ್ಯಾನೇಜರ್‌ ಗ್ರಾಹಕರು ಅಡಮಾನ ಇಟ್ಟಿದ್ದ 1,86 ಕೋಟಿ ರೂ. ಮೌಲ್ಯದ 3 ಕೆಜಿ 157 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ ಎಂದು ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದರು.

ಪೊಲೀಸರು ಗೋಲ್ಡ್‌ ಲೋನ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದ ಸಂಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಈತ ಹಲವು ಬ್ಯಾಂಕ್‌ಗಳಲ್ಲಿ ತನ್ನ ತಂದೆ, ತಾಯಿ, ಸ್ನೇಹಿತರ ಹೆಸರಿನಲ್ಲಿ ಅಡಮಾನ ಇಟ್ಟು ಸಾಲ ಪಡೆದಿರುವುದಾಗಿ ತಿಳಿದು ಬಂದಿದೆ. ಈತ ಅಡಮಾನ ಇಟ್ಟ ಒಟ್ಟು 2.61 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಈತ ಹಲವು ಬ್ಯಾಂಕ್‌ಗಳಲ್ಲಿ ಗೋಲ್ಡ್‌ ಲೋನ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದ. ಹಾಗೂ ಸಂಜಯ್‌ ಮೇಲೆ ಬ್ಯಾಂಕಿನವರಿಗೆ ನಂಬಿಕೆ ಇತ್ತು. ಇದನ್ನೇ ಆತ ತನ್ನ ಬಂಡವಾಳವನ್ನಾಗಿ ಉಪಯೋಗಿಸಿ ಬ್ಯಾಂಕಿನವರಿಗೆ ಮೋಸ ಮಾಡಿದ್ದ. ಬ್ಯಾಂಕಿನಲ್ಲಿ ಬಂಗಾರದ ಆಭರಣಗಳನ್ನು ಚೆಕ್‌ ಮಾಡಲು ಅಕ್ಕಸಾಲಿಗರನ್ನು ಇಟ್ಟಿರಲಿಲ್ಲ. ಬಿಸಿಎ ವಿದ್ಯಾಭ್ಯಾಸ ಪಡೆದಿರುವ ಸಂಜಯ್‌ ಆನ್‌ಲೈನ್‌ ಬೆಟ್ಟಿಂಗ್‌ ಚಾಳಿಗೆ ಬಿದ್ದಿದ್ದು, ಪದೇ ಪದೇ ಗೋವಾಕ್ಕೆ ಹೋಗಿ ಕ್ಯಾಸಿನೋಗಳಲ್ಲಿ ಗೇಮ್‌ ಆಟವಾಡುತ್ತಿದ್ದ. ಐಷರಾಮಿ ಜೀವನಕ್ಕೆ ಮೊರೆ ಹೋಗಿದ್ದ ಆರೋಪಿ ಇದೀಗ ಜೈಲು ಸೇರಿದ್ದಾನೆ.

Comments are closed.