POCSO: ಪೋಕ್ಸೊ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ

Kalburgi: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಆರೋಪಿಯನ್ನು ಆಳಂದ (Alanda) ತಾಲ್ಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂದು ಗುರುತಿಸಲಾಗಿದೆ.

ಎರಡು ವರ್ಷಗಳ ಹಿಂದೆ, 2023ರ ಜು.15ರಂದು ಆಳಂದ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಪುಸ್ತಕ ತರಲು ಇನ್ನೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿ ಚೋಪಡೆಯು ಬಾಲಕಿಯನ್ನು ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ತದನಂತರ ಉಸಿರುಗಟ್ಟಿಸಿ ಸಾಯಿಸಿ, ಪಕ್ಕದ ಬಾವಿಯೊಂದರಲ್ಲಿ ಶವ ಎಸೆದು ಹೋಗಿದ್ದ.
ಈ ಕುರಿತು ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖಾಧಿಕಾರಿ ಭಾಸು ಚವ್ಹಾಣ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಬರೆದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಈ ಪೋಕ್ಸೊ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ, ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಕಾನೂನು ಪ್ರಾಧಿಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಮೃತ ಬಾಲಕಿಯ ತಾಯಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.
ಕಲಬುರ್ಗಿ ಜಿಲ್ಲೆಯ ನಿಂಬರ್ಗಾ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
Comments are closed.